ಕನಸುಗಳ ಸಾಕಾರಕ್ಕೆ ಸಂಕಲ್ಪ ಮಾಡಿರಿ

15 LXR-1
Published on

ಲಕ್ಷ್ಮೇಶ್ವರ: ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ಸ್ವಾತಂತ್ರೃ ಪಡೆದಿದ್ದೇವೆ. ದೇಶದ ಭವಿಷ್ಯದ ಕನಸುಗಳ ಸಾಕಾರಕ್ಕೆ ಕೈಜೋಡಿಸುವ ಸಂಕಲ್ಪ ಮತ್ತು ದೇಶಕ್ಕಾಗಿ ನಮ್ಮದೇನು ಕೊಡುಗೆ ಎಂಬ ಆತ್ಮಾವಲೋಕನ ನಮ್ಮೆಲ್ಲರದ್ದಾಗಬೇಕು ತಹಸೀಲ್ದಾರ್ ಕೆ. ಆನಂದಶೀಲ ಹೇಳಿದರು.

ಮಂಗಳವಾರ ಪಟ್ಟಣದ ಉಮಾ ವಿದ್ಯಾಲಯ ಮೈದಾನದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಸ್ವಾತಂತ್ರೊೃೀತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ಶೈಕ್ಷಣಿಕ, ಔದ್ಯೋಗಿಕ, ತಾಂತ್ರಿಕ, ಕೃಷಿ ಹೀಗೆ ಎಲ್ಲ ರಂಗದಲ್ಲಿ ತನ್ನದೇ ಛಾಪು ಮೂಡಿಸಿ ವಿಶ್ವಗುರುವಾಗಿದೆ. ಜಾತಿ, ಮತ, ಧರ್ಮ, ರಾಜಕೀಯ ಬದಿಗೊತ್ತಿ ದೇಶಾಭಿಮಾನ, ಸ್ವಾಭಿಮಾನ, ಸಹೋದರತ್ವ ಭಾವನೆಯಿಂದ ಬಾಳುವ ಸಂಕಲ್ಪ ಮಾಡಬೇಕಿದೆ. ಮಕ್ಕಳಲ್ಲಿ ದೇಶಭಕ್ತಿ, ಗುರುಹಿರಿಯರನ್ನು ಗೌರವಿಸುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.

ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಆಶಯಗಳಿಗೆ ಬದ್ಧರಾಗಿರಬೇಕು. ಯುವ ಪೀಳಿಗೆ ದೇಶದ ಮಹೋನ್ನತಿಗೆ ಸದ್ಬಳಕೆಯಾಗಬೇಕು. ನನ್ನ ದೇಶ, ನನ್ನ ಜನ, ನಾವು ಭಾರತಾಂಬೆಯ ಮಕ್ಕಳು ಎಂಬ ದೇಶಭಕ್ತಿ ಮೂಡಿ ದೇಶದ ಶಕ್ತಿಯಾಗಿರುವ ರೈತ, ಸೈನಿಕ ಮತ್ತು ಶಿಕ್ಷಕರನ್ನು ಸದಾ ಗೌರವದಿಂದ ಕಾಣಬೇಕು ಎಂದರು.

ಪೊಲೀಸ್, ಎನ್‌ಸಿಸಿ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು. ಪಥಸಂಚಲನದ ನೇತೃತ್ವವನ್ನು ಪಿಎಸ್‌ಐ ಯೂಸೆಫ್ ಜಮೂಲಾ ವಹಿಸಿದ್ದರು. ಶಾಲಾ ಮಕ್ಕಳಿಂದ ವೇಷಭೂಷಣ, ಸಾಂಸ್ಕೃತಿಕ ಸ್ಪರ್ಧೆ, ಭಾಷಣ ಸ್ಫರ್ಧೆಯೊಂದಿಗೆ ಸ್ವಾತಂತ್ರಯೋತ್ಸವ ವಿಜೃಂಭಣೆಯಿಂದ ನಡೆಯಿತು. ಸ್ಕೂಲ್ ಚಂದನ ಶಾಲೆಯ ಮಕ್ಕಳ ವಿಶೇಷ ಬ್ಯಾಂಡ್ ಕಾರ್ಯಕ್ರಮಕ್ಕೆ ಕಳೆ ನೀಡಿತು.

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹನುಮಂತಪ್ಪ ಚಿಂಚಲಿ, ಮಹೇಂದ್ರ ಬೆಟಗೇರಿ, ಭೀಮರೆಡ್ಡಿ ಕುರ್ತಕೋಟಿ ಅವರನ್ನು ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಿಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಪುರಸಭೆ ಸದಸ್ಯರಾದ ಮಹೇಶ ಹೊಗೊಸೊಪ್ಪಿನ, ಪ್ರವೀಣ ಬಾಳಿಕಾಯಿ, ಬಸವರಾಜ ಓದುನವರ, ಜಿ.ಆರ್. ಕೊಪ್ಪದ, ಅಮರೇಶ ತೆಂಬದಮನಿ, ಡಾ.ಎಂ.ಎನ್. ಹವಳದ, ಎಸ್.ಕೆ. ಜಲರೆಡ್ಡಿ ಎ.ಪಿ. ಸುಗಂಧಿ, ಬಿ.ಎನ್. ಕಾತರಾಳ, ಬಿ.ಎಸ್. ಹಿರೇಮಠ, ಟಾಕಪ್ಪ ಸಾತಪುತೆ ಪಾಲ್ಗೊಂಡಿದ್ದರು. ಚಂದ್ರಶೇಖರ ನರಸಮ್ಮನವರ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ, ಸತೀಶ ಬೋಮಲೆ, ಉಮೇಶ ನೇಕಾರ, ಎನ್.ಎ ಮುಲ್ಲಾ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net