

ಬೆಟ್ಟದಪುರ: ಚಂಚಲ ಮನಸ್ಸಿನಿಂದ ಯಾವುದೇ ಕೆಲಸ ಮಾಡಬಾರದು. ತಾವು ಮಾಡುವ ಕೆಲಸದ ಮೇಲೆ ಸದಾ ಏಕಾಗ್ರತೆ, ನಿಷ್ಟೆ ಇರಲಿ ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಭೀಮರಾಜು ಈರೇಗೌಡ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ದೊಡ್ಡನೇರಳೆ ಗ್ರಾಮದಲ್ಲಿ ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಭಾನುವಾರ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಮಾತನಾಡಿ, ಕಲಿಕೆ ಜತೆಯಲ್ಲಿ ಆದರ್ಶವು ಇರಬೇಕು. ಪದವಿಗೆ ತನ್ನದೇ ಆದ ಮಹತ್ವವಿದೆ. ಅಂದಿನ ಕಾಲದಲ್ಲಿ ಮೈಸೂರಿನ ಮಹಾರಾಜರು ಪದವಿಯನ್ನು ಪ್ರದಾನ ಮಾಡುತ್ತಿದ್ದರು. ಆದರೆ ಇಂದು ಕೆಲವೆಡೆ ಪದವಿಯನ್ನೇ ಮಾರಾಟ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಶಿಕ್ಷಣಕ್ಕೆ ತನ್ನದೇ ಮೌಲ್ಯವಿದೆ. ಅದನ್ನು ಎಂದಿಗೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ಜೀವನ ಎಂದಿಗೂ ಅಂದುಕೊಂಡ ಹಾಗೇ ಸಾಗಲ್ಲ, ಬಂದಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.
ಹಸಿರು ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಫಯಾಜ್ ಮಾತನಾಡಿ, ರೈತರ ಮಕ್ಕಳಾದ ನಾವ ಭೂಮಿ ತಾಯಿಗೆ ಹಾಗೂ ರೈತರಿಗೆ ವಿಶೇಷ ಗೌರವ ನೀಡಬೇಕು. ವಿದ್ಯಾರ್ಥಿಗಳು ರೈತರ ಸಮಸ್ಯೆಗಳನ್ನು ಅರಿತುಕೊಳ್ಳಬೇಕು. ಮನೆಯಲ್ಲಿ ತಮ್ಮ ಮಗ ಅಥವಾ ಮಗಳು ಓದಿ ವಿದ್ಯಾವಂತರಾಗಿ ಒಳ್ಳೆಯ ಕೆಲಸ ತೆಗೆದುಕೊಳ್ಳುತ್ತಾರೆ ಎಂದು ಕಾಲೇಜಿಗೆ ಕಳುಹಿಸುತ್ತಾರೆ. ಅದನ್ನು ಮನದಲ್ಲಿ ಇಟ್ಟುಕೊಂಡು ಸ್ಪರ್ಧಾತ್ಮಕ ಯುಗದಲ್ಲಿ ಏಕಾಗ್ರತೆಯಿಂದ ಅಭ್ಯಾಸ ಮಾಡಿ ಯಶಸ್ಸು ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹಸಿರು ಸೇನೆ ವತಿಯಿಂದ ಶಿಬಿರಾರ್ಥಿಗಳಿಗೆ ಹಸಿರು ಶಲ್ಯ ವಿತರಣೆ ಮಾಡಲಾಯಿತು. ರೈತ ಸಂಘದ ಪದಾಧಿಕಾರಿಗಳ ಆಗಮನದ ಹಿನ್ನೆಲೆಯಲ್ಲಿ ವೇದಿಕೆಯನ್ನು ವಿಶೇಷವಾಗಿ ಅಲಂಕರಿಸಿಲಾಗಿತ್ತು.
ಈ ಸಂದರ್ಭದಲ್ಲಿ ನಂಜುಂಡಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ಹಸಿರು ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಫಯಾಜ್, ಜಿಲ್ಲಾ ಘಟದ ಅಧ್ಯಕ್ಷ ರಫೀಕ್ ವುಲ್ಲಾ, ರಾಜ್ಯ ಕಾರ್ಯದರ್ಶಿ ಪ್ರಕಾಶ್, ವಿವಿಧ ತಾಲೂಕು ಅಧ್ಯಕ್ಷರಾದ ಡಿ.ಎಸ್ ಕುಮಾರ್, ಗಂಗಾಧರ್, ಯೋಗೇಶ್, ಅನುಸೂಯ, ಹೋಬಳಿ ಘಟಕದ ಅಧ್ಯಕ್ಷ ವಾಸು, ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯ, ಮುಖಂಡರಾದ ರವಿ, ಅಣ್ಣೆಗೌಡ, ಮಲ್ಲೇಶ್, ಸುರೇಶ, ಹರೀಶ್, ಶಿಬಿರಾಧಿಕಾರಿ ಜಲೇಂದ್ರ, ಸಹ ಶಿಬಿರಾಧಿಕಾರಿ ಪ್ರಮೋದ್, ಅಧ್ಯಪಾಕರಾದ ಡಾ.ಎಸ್.ಕೆ ಮಂಜು, ರಂಗನಾಥ, ವಿಶ್ವನಾಥ್, ಕಾವ್ಯಾ, ಶಿಬಿರ ಸಹಾಯಕ ಡಿ.ಎಂ.ಕೀರ್ತಿ ಇತರರಿದ್ದರು.