ಅಂಗವಿಕಲರಿಗೆ ಕನಿಕರಕ್ಕಿಂತ ಆತ್ಮಸ್ಥೈರ್ಯ ತುಂಬಿ

tke mla
ತರೀಕೆರೆಯಲ್ಲಿ ಹಿರಿಯ ನಾಗರಿಕರು, ಅಂಗವಿಕಲರ ತಪಾಸಣೆ ಶಿಬಿರವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಪೃಥ್ವಿಜಿತ್, ಟಿ.ಎಸ್.ಗಣೇಶ್, ಎನ್.ಚರಣ್‌ರಾಜ್, ಟಿ.ಎನ್.ಜಗದೀಶ್ ಇತರರಿದ್ದರು.
Published on

ತರೀಕೆರೆ: ಅಂಗವಿಕಲರಿಗೆ ಕನಿಕರ ತೋರುವುದಕ್ಕಿಂತ ಆತ್ಮಸ್ಥೈರ್ಯ ತುಂಬಬೇಕು. ಅಂಗವಿಕಲರು ಧೃತಿಗೆಡದೆ ಜೀವನ ನಿರ್ವಹಣೆ ಮಾಡಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಮಂಗಳವಾರ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಅಲಿಮ್ಕೋ ಸಂಸ್ಥೆಯಿಂದ ಉಚಿತವಾಗಿ ವಿವಿಧ ಸೌಲಭ್ಯ ವಿತರಿಸಲು ಏರ್ಪಡಿಸಿದ್ದ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಂಗವೈಕಲ್ಯ ಶಾಪವಲ್ಲ. ಹಿರಿಯರು ಸಮಾಜಕ್ಕೆ ಹೊರೆಯಲ್ಲ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಸರ್ಕಾರ ಅಂಗವಿಕಲರ ಕಲ್ಯಾಣಕ್ಕೆ ಹಲವು ಸೌಲಭ್ಯ ಕಲ್ಪಿಸುತ್ತಿದ್ದು, ಅದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲಿಮ್ಕೋ ಸಂಸ್ಥೆ ಗುಣಮಟ್ಟದ ಸಾಧನ ತಯಾರಿಸುತ್ತಿದ್ದು, ಸದ್ಯದಲ್ಲೇ ವಿತರಣೆಯಾಗಲಿದೆ. ಪ್ರಯೋಜನ ಪಡೆಯುವವರು ಅದರ ನೆರವಿನಿಂದ ಸ್ವತಂತ್ರವಾಗಿ ಓಡಾಡಬಹುದು ಎಂದು ಹೇಳಿದರು.
ಪರೀಕ್ಷಾ ಶಿಬಿರದಲ್ಲಿ 350ಕ್ಕೂ ಹೆಚ್ಚು ಹಿರಿಯರು ಹಾಗೂ ಅಂಗವಿಕಲರಿಗೆ ಪರೀಕ್ಷಿಸಿ ಸೌಲಭ್ಯ ವಿತರಿಸಲು ಹೆಸರು ನೋಂದಾಯಿಸಿಕೊಳ್ಳಲಾಯಿತು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪೃಥ್ವಿಜಿತ್, ತಾಪಂ ಇಒ ಟಿ.ಎಸ್.ಗಣೇಶ್, ಸಿಡಿಪಿಒ ಎನ್.ಚರಣ್‌ರಾಜ್, ಕಾಂಗ್ರೆಸ್ ಸೇವಾದಳದ ತಾಲೂಕು ಅಧ್ಯಕ್ಷ ಟಿ.ಎನ್.ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net