ವೃತ್ತಿಯಲ್ಲಿ ಬದ್ಧತೆ ಇರಲಿ

7 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕಂದಾಯ ಇಲಾಖೆ ಸರ್ಕಾರದ ಪ್ರಮುಖ ಮತ್ತು ದೊಡ್ಡ ಖಾತೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಮಹತ್ವದ ಪಾತ್ರ ನಿರ್ವಹಿಸುವ ಈ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಅರ್ಹತೆ ಆಧಾರದಲ್ಲಿ ಪದೋನ್ನತಿ, ಸೌಲಭ್ಯ ನೀಡಲು ಜಿಲ್ಲಾಡಳಿತ ಬದ್ಧವಾಗಿದೆ. ಪ್ರತಿಯೊಬ್ಬರು ಕರ್ತವ್ಯಗಳನ್ನು ಬದ್ಧತೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರಥಮ ಬಾರಿಗೆ ಏರ್ಪಡಿಸಿದ್ದ ಜಿಲ್ಲಾ ಕಂದಾಯ ನೌಕರರ ಕುಂದು-ಕೊರತೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂದಿನ 15 ದಿನಗಳಲ್ಲಿ ಎಲ್ಲ ತಹಸೀಲ್ದಾರರು ಆಯಾ ತಾಲೂಕು ಮಟ್ಟದಲ್ಲಿ ಕಂದಾಯ ನೌಕರರ ಸಭೆ ಜರುಗಿಸಿ, ವಿವರವಾದ ವರದಿಯೊಂದಿಗೆ ಬಡ್ತಿ, ಕಚೇರಿ ನಿವೇಶನ, ಕಟ್ಟಡ, ಸಿಬ್ಬಂದಿ ವಸತಿ ಗೃಹ ಪ್ರಸ್ತಾವನೆಯನ್ನು ಉಪವಿಭಾಗಾಧಿಕಾರಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದರು.

ಜಿಲ್ಲೆಯಲ್ಲಿ ಒಟ್ಟು 541 ಹುದ್ದೆಗಳಲ್ಲಿ 97 ಹುದ್ದೆಗಳು ಖಾಲಿ ಇವೆ. ಇವುಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಕಂದಾಯ ಇಲಾಖೆ ಭೂಮಿ ಒತ್ತುವರಿ ಆಗಿದೆ. ತಹಸೀಲ್ದಾರರು ತಮ್ಮ ವ್ಯಾಪ್ತಿಯಲ್ಲಿನ ಭೂಮಿ ಗುರುತಿಸಿ, ಅಳತೆ ಮಾಡಿಸಬೇಕು. ಒತ್ತುವರಿ ಆಗಿದ್ದರೆ ಪೊಲೀಸ್​ ಬಂದೋಬಸ್ತ್​ನಲ್ಲಿ ತರವುಗೊಳಿಸಬೇಕು. ಇಲಾಖೆ ಕಚೇರಿ ಕಟ್ಟಡ, ಸಿಬ್ಬಂದಿ, ಅಧಿಕಾರಿಗಳಿಗೆ ವಸತಿಗೃಹ ನಿರ್ಮಿಸಲು ಮೀಸಲಿಡಬೇಕು. ಈ ಕುರಿತು ತುರ್ತು ಕ್ರಮವಹಿಸಿ ತಹಸೀಲ್ದಾರರು ವರದಿ ಸಲ್ಲಿಸಬೇಕು. ಅಪರ ಜಿಲ್ಲಾಧಿಕಾರಿ ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್​ ಮಾತನಾಡಿದರು. ತಹಸೀಲ್ದಾರರು, ಉಪ ತಹಸೀಲ್ದಾರರು, ಶಿರಸ್ತೇದಾರರು, ಇತರರು ಇದ್ದರು.

ಸಚಿನ ಮಳಗಿ ಸ್ವಾಗತಿಸಿದರು. ವೆಂಕಟೇಶ ಹಟ್ಟಿಯವರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಸೀರ್​ ಅಮರಗೋಳ ನಿರೂಪಿಸಿದರು. ಆನಂದ ನಾಯಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net