

ಮೈಸೂರು: ವೇದ ಮತ್ತು ಶಾಸ್ತ್ರ ವಿದ್ಯೆ ಅಧ್ಯಯನ ಮಾಡಿದವರು ಸನಾತನ ಧರ್ಮ, ಸಂಸ್ಕೃತಿ ಮತ್ತು ಪರಂಪರೆ ಪಾಲನೆಗೆ ಬದ್ಧರಾಗಬೇಕು ಎಂದು ಉಡುಪಿ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ನುಡಿದರು.
ನಗರದ ಕೃಷ್ಣಮೂರ್ತಿಪುರಂನ ಶ್ರೀವ್ಯಾಸತೀರ್ಥ ವಿದ್ಯಾಪೀಠದಲ್ಲಿ ಹಮ್ಮಿಕೊಂಡಿರುವ ಸುಧಾಮಂಗಳ ಮಹೋತ್ಸವದಲ್ಲಿ ಬುಧವಾರ ಜರುಗಿದ ವಿದ್ವತ್ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸೋಸಲೆ ಶ್ರೀವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಮಾತನಾಡಿ, ಅಧ್ಯಾತ್ಮ ಪ್ರವೃತ್ತಿಯನ್ನು ಸಮಾಜ ಗೌರವಿಸುತ್ತದೆ. ವೇದ ಹೇಳಿದ ಮಾರ್ಗದಲ್ಲಿ ಸಾಗುವವರನ್ನು ಬೆಂಬಲಿಸುತ್ತದೆ. ಸಾಮಾಜಿಕ ಸ್ವಾಸ್ಥೃ ಪಾಲನೆಗೆ ಶಾಸ್ತ್ರಾಧ್ಯಯನ ಮಾಡಿದ ಯುವಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಶ್ರೀಮಾನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀಸತ್ಯಾತ್ಮತೀರ್ಥ ಸ್ವಾಮೀಜಿ, ಸುಘೋಷ ಎಂಬ ವಿದ್ಯಾರ್ಥಿಯ ಶ್ರೀಮನ್ ನ್ಯಾಯಸುಧಾ ಗ್ರಂಥದ ಪ್ರಥಮಾಧ್ಯಾಯದ ಪರೀಕ್ಷೆಯನ್ನು ಸೂಕ್ಷ್ಮವಾಗಿ ಗಮನಿಸಿದರು. ಶ್ರೀವ್ಯಾಸರಾಜರು ರಚಿಸಿದ ನ್ಯಾಯಾಮೃತ ಗ್ರಂಥದ 36 ಪ್ರಕರಣ ಹಾಗೂ ಚಂದ್ರಿಕಾ ಗ್ರಂಥದ ಪ್ರಥಮ ಪಾದದ ಪರೀಕ್ಷಾ ಕ್ರಮವನ್ನು ಮೆಚ್ಚಿಕೊಂಡರು.
ನಂತರ ವಿಶ್ಲೇಷಣಾತ್ಮಕವಾಗಿ ವಿಷಯ ಕುರಿತು ಮಾತನಾಡಿದ ಅವರು, ನ್ಯಾಯ ಸುಧಾ ಮತ್ತು ವ್ಯಾಸತ್ರಯವೆಂಬ ವಿಸ್ತಾರವಾದ ಗ್ರಂಥದ ಭಾಗವನ್ನು ನಿರರ್ಗಳವಾಗಿ, ಸಂಸ್ಕೃತ ಕೃತಿ ನಿರಪೇಕ್ಷವಾಗಿ ನಿರೂಪಿಸುವುದು ಕಷ್ಟಕರ. ಆದರೆ ಶ್ರೀ ವಿದ್ಯಾಶ್ರೀಶ ತೀರ್ಥರಿಂದ ಪಾಠ- ಪ್ರವಚನ ಕೇಳಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಸುಲಲಿತವಾಗಿ ವಿವಿಧ ವಿದ್ವಾಂಸರ ಪ್ರಶ್ನೆಗಳಿಗೆ ಉತ್ತರಿಸಿದ್ದು ಅಭಿನಂದನಾರ್ಹ ಎಂದರು.
ಹಿರಿಯ ವಿದ್ವಾಂಸ ಆನಂದತೀರ್ಥ ನಾಗಸಂಪಿಗೆ ಮಾತನಾಡಿ, ವಿದ್ವತ್ತಿಗೆ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಮಾದರಿ ಎಂದು ಕೊಂಡಾಡಿದರು. ಮುಂಬೈ ವಿದ್ಯಾಪೀಠದ ವಿದ್ವಾಂಸ ಮಾಹುಲಿ ವಿದ್ಯಾಸಿಂಹಾಚಾರ್ಯ, ಹರಿದಾಸ ಭಟ್ಟ, ಶೇಷಗಿರಿ ಆಚಾರ್ಯ, ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕರಾದ ಮಧ್ವೇಶ ಆಚಾರ್ಯ, ಮಾತರಿಶ್ವ ಆಚಾರ್ಯ, ರಾಮಕೃಷ್ಣ ಭಟ್, ಜಯತೀರ್ಥ ವಿದ್ಯಾಪೀಠದ ಪಂಡಿತ ಪ್ರಹ್ಲಾದ ಆಚಾರ್ಯ, ಹೊನ್ನಾಳಿ ಸತ್ಯಬೋಧ ಅಚಾರ್ಯ, ಬಾದರಾಯಣ ಆಚಾರ್ಯ, ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ.ಡಿ.ಪಿ ಮಧು ಸೂದನಾಚಾರ್ಯ, ಪ್ರಾಚಾರ್ಯ ಡಾ. ಶ್ರೀನಿಧಿ ಪ್ಯಾಟಿ ಇತರರು ಇದ್ದರು.