

ಮಂಗಳೂರು: ಸುಲಭವಾಗಿ ಸಿಗುವ ಸಣ್ಣ ಸಾಲದ ಮೋಹಕ್ಕೆ ಬಿದ್ದು ಮೊಬೈಲ್ ಆ್ಯಪ್ ಲೋನ್ ಪಡೆದು, ಬಳಿಕ ಅನಿಯಂತ್ರಿತ ಬಡ್ಡಿ, ಗೌಪ್ಯ ಶುಲ್ಕಗಳ ನೆಪದಲ್ಲಿ ಬದುಕನ್ನೇ ಹಿಂಡಿ ಹಿಪ್ಪೆ ಮಾಡುವ ಮೊಬೈಲ್ ಆ್ಯಪ್ ಲೋನ್‌ಗಳ ಸಾಲದ ಮೋಹಕ್ಕೆ ಬಲಿ ಬೀಳಬೇಡಿ ಎಂದು ಪೊಲೀಸ್ ಇಲಾಖೆ ಯುವಕರಿಗೆ ಎಚ್ಚರಿಕೆ ನೀಡಿದೆ.
ಕಿನ್ನಿಗೋಳಿಯ ಪಕ್ಷಿಕೆರೆ ನಿವಾಸಿ ಸುಶಾಂತ್(26) ಜ.10ರಂದು ಹಾಗೂ ಉಡುಪಿ ಜಿಲ್ಲೆಯ ಹೆಮ್ಮಾಡಿಯ ಹರೆಗೋಡು ಕೊಳಹಿತ್ಲು ನಿವಾಸಿ ವ್ನಿೇಶ್(25) ಡಿ.30ರಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಲೋನ್ ಆ್ಯಪ್ ಸಂಸ್ಥೆಯ ಕಿರುಕುಳವೇ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಸುಶಾಂತ್ ರ‌್ಯಾಪಿಡ್ ಆ್ಯಪ್ ಮೂಲಕ 30 ಸಾವಿರ ರೂ. ಆನ್‌ಲೈನ್ ಸಾಲ ಪಡೆದಿದ್ದರು. ಬಳಿಕ ಅದನ್ನು ಪಾವತಿಸಲಾಗದಿದ್ದಾಗ ಆ್ಯಪ್ ಕಂಪನಿ ಕಿರುಕುಳ ನೀಡಿತ್ತು. ಸುಶಾಂತ್ ಮೊಬೈಲ್‌ನ ಎಲ್ಲ ಕಾಂಟಾಕ್ಟ್‌ಗಳ ಮಾಹಿತಿ ಪಡೆದು ಎಲ್ಲರಿಗೂ ಸಂದೇಶ ಕಳುಹಿಸುವ ಬೆದರಿಕೆಯನ್ನು ಕಂಪನಿ ಒಡ್ಡಿತ್ತು. ಇದರಿಂದ ನೊಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಲೋನ್ ಆ್ಯಪ್ ಬಳಕೆಯಿಂದ ಮಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಥಮ ಕೇಸ್ ಇದಾಗಿದೆ. ಇದರ ಹಿಂದೆ ವಂಚಕ ತಂಡ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಲಾಗುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಮೋಸ ಹೋಗುವುದು ಹೇಗೆ?: ಭಾರತದಲ್ಲಿ 600ಕ್ಕಿಂತ ಹೆಚ್ಚು ಲೋನ್ ಆ್ಯಪ್‌ಗಳಿದ್ದು, ಇವುಗಳಿಗೆ ಆರ್‌ಬಿಐ ಮಾನ್ಯತೆ ಇಲ್ಲ. ಇವುಗಳು ಪ್ಲೇಸ್ಟೋರ್‌ನಲ್ಲಿ ಲಭ್ಯ ಇವೆ. ಹೆಚ್ಚಿನ ಆ್ಯಪ್‌ಗಳು ಇನ್‌ಸ್ಟಾಲ್ ಮಾಡುವಾಗ ಕಾಂಟಾಕ್ಟ್, ವಿಡಿಯೋ ಕ್ಯಾಮರಾ ಸಹಿತ ಹಲವು ಅನುಮತಿಗಳನ್ನು ಕೇಳುತ್ತವೆ. ನಂತರ ಸಣ್ಣಪ್ರಮಾಣದ ಸಾಲ ಅಂದರೆ 3 ಸಾವಿರ ರೂ. ಅಥವಾ 5 ಸಾವಿರ ರೂ. ಹಣ ನೀಡುತ್ತಾರೆ. ಹಿಂತಿರುಗಿಸುವಾಗ ಶೇ.30ರಿಂದ 60 ಬಡ್ಡಿ ವಿಧಿಸಿ ಸಾಲ ಚುಕ್ತ ಮಾಡಲು ಹೇಳುತ್ತಾರೆ. ಸಾಲ ಹಿಂದಿರುಗಿಸದೆ ಇದ್ದಲ್ಲಿ ಕ್ರೆಡಿಟ್ ರೇಟ್ ಕಡಿಮೆಯಾಗುತ್ತದೆ ಎಂದು ಸಂಸ್ಥೆಗಳು ಬ್ಲಾೃಕ್‌ಮೇಲ್ ಮಾಡುತ್ತವೆ. ಮೊಬೈಲ್‌ಗಳಿಂದ ಚಿತ್ರಗಳನನು ಕದ್ದು, ಅಶ್ಲೀಲ ಚಿತ್ರಗಳಾಗಿ ಮಾರ್ಫಿಂಗ್ ಮಾಡಿ ಪರಿಚಯಸ್ಥರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಾರೆ. ವಂಚನೆ ಕೇಸು ದಾಖಲಿಸುವುದಾಗಿಯೂ ಹೇಳುತ್ತಾರೆ. ಕೆಲವೊಮ್ಮೆ ನಕಲಿ ಎಫ್‌ಐಆರ್ ಕಳುಹಿಸುತ್ತಾರೆ. ಮುಂದೆ ನಿಮಗೆ ಬ್ಯಾಂಕ್ ಸಾಲ ಸಿಗುವುದಿಲ್ಲ ಎಂದು ಹೆದರಿಸುತ್ತಾರೆ. ಹಾಗಾಗಿ ಯಾರೂ ಇಂತಹ ಆ್ಯಪ್ ಡೌನ್‌ಲೋಡ್ ಮಾಡಬಾರದು. ಯಾವುದೇ ಆ್ಯಪ್‌ಗೂ ಕಾಂಟಾಕ್ಟ್, ವಿಡಿಯೋ- ಫೋಟೊ ನೋಡಲು ಅನುಮತಿ ನೀಡಬಾರದು ಎಂದು ಕಮಿಷನರ್ ಶಶಿಕುಮಾರ್ ಸಲಹೆ ನೀಡಿದ್ದಾರೆ.