

ಹಾನಗಲ್ಲ: ಭೂಮಿಯು ಬಹುಪಾಲು ನೀರಿನಿಂದ ಆವೃತವಾಗಿದ್ದರೂ ಎಲ್ಲವೂ ಬಳಕೆಗೆ ಯೋಗ್ಯವಲ್ಲ. ಆದ್ದರಿಂದ ಪಾರದರ್ಶಕ ನೀರಿನ ನೈಸರ್ಗಿಕ ರಾಸಾಯನವನ್ನು ಬುದ್ಧಿವಂತಿಕೆ ಹಾಗೂ ಯೋಜನಾಬದ್ಧವಾಗಿ ಬಳಸಬೇಕು ಎಂದು ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಹೇಳಿದರು.
ಪಟ್ಟಣದ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗದ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಹೊರ ತಂದ ಸಂಶೋಧನಾ ಪುಸ್ತಕವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನೀರಿನ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.
ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ ಹೊಳೇರ ಮಾತನಾಡಿ, ಹಾನಗಲ್ಲ ತಾಲೂಕು ಅರೆ-ಮಲೆನಾಡು ಪ್ರದೇಶವಾಗಿದ್ದು, ಅಂತರ್ಜಲ ಅಭಿವೃದ್ಧಿಯ ಒಟ್ಟಾರೆ ಹಂತವು ಜಿಇಸಿ (ವಾಟರ್ ಎಸ್ಟಿಮೇಷನ್ ಕಮಿಟಿ) ಪ್ರಕಾರ 2017ರಲ್ಲಿ ಶೇ. 34.57 ಮತ್ತು 2020ರಲ್ಲಿ ಇದು ಶೇ. 34.96 ರಷ್ಟಿದ್ದು ಮಧ್ಯಮ ಮಟ್ಟದಲ್ಲಿದೆ. ಮಳೆಗಾಲದ ನಂತರದ ಅವಧಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದರೂ ಮುಂಗಾರು ಪೂರ್ವದ ದೀರ್ಘಾವಧಿಯ ಅಂತರ್ಜಲ ಕುಸಿಯುತ್ತಿರುವ ಪ್ರವೃತ್ತಿ ತೋರಿಸುತ್ತದೆ. ಖಚಿತವಾದ ನೀರಾವರಿ ಕೊರತೆಯು ಕೃಷಿಯ ತೀವ್ರತೆ, ಬೆಳೆಗಳ ಆಯ್ಕೆ ಮತ್ತು ಉತ್ಪಾದನೆಯ ಮಟ್ಟವನ್ನು ಮಿತಿಗೊಳಿಸಿ ಆರ್ಥಿಕ ಸ್ವಾವಲಂಬನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಜಲ ಸಂಪನ್ಮೂಲದ ಮೂಲಗಳಾದ ನದಿ, ಕೆರೆ, ಬಾವಿಗಳನ್ನು ಸಂರಕ್ಷಿಸಿಕೊಳ್ಳುವುದು ಅತ್ಯವಶ್ಯಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಂ.ಎಚ್. ಹೊಳಿಯಣ್ಣನವರ ಮಾತನಾಡಿ, ಕಾಲೇಜ್‌ನ ಭೂಗೋಳಶಾಸ್ತ್ರ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮಂಡಿಸಿದ ಈ ಪುಸ್ತಕವು ಪ್ರಸ್ತುತ ಹಾನಗಲ್ಲ ತಾಲೂಕಿನ ಜಲ ಸಂಪನ್ಮೂಲದ ಸಂಗತಿಗಳು ಅಂಕಿ-ಅಂಶಗಳ ಸಹಿತ ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಹಂಸಭಾವಿ ಎಂ.ಎ.ಎಸ್.ಸಿ. ಪದವಿ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ ದಾನೇನವರ ಉಪನ್ಯಾಸ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ಪಿ.ವೈ. ಗುಡಗುಡಿ ಮಾತನಾಡಿದರು.
ವಿದ್ಯಾ ಹಂಚಿನಮನಿ ಪ್ರಾರ್ಥಿಸಿದರು. ಸುಧಾ ಗಂಜಿಗಟ್ಟಿ ಹಾಗೂ ರೇಣುಕಾ ಅಕ್ಕಿವಳ್ಳಿ ಸ್ವಾಗತಿಸಿದರು. ಎಸ್.ಕೆ. ಸೌಮ್ಯಾ ಪರಿಚಯಿಸಿದರು. ಸ್ನೇಹಾ ಗೌಡಗೇರಿ ವಂದಿಸಿದರು. ಭೀಮಮ್ಮ ಸರಗಿ ಹಾಗೂ ಸೌಮ್ಯಾ ಬೊಮ್ಮನಹಳ್ಳಿ ನಿರೂಪಿಸಿದರು.