

ಬೆಂಗಳೂರು ಗ್ರಾಮಾಂತರ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಕರೊನಾ ತಡೆ ಮುಂಜಾಗ್ರತೆಯಲ್ಲಿ ಲೋಪವಾಗಬಾರದು ಎಂದು ಜಿಪಂ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ದೇವನಹಳ್ಳಿ ತಾಲೂಕು ಜಿಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ತೃತೀಯ ಸ್ಥಾನ ಪಡೆದಿತ್ತು. ಈ ಬಾರಿ ಕರೊನಾ ಕಾರಣದಿಂದ ಗೊಂದಲದ ನಡುವೆಯೇ ಪರೀಕ್ಷೆ ನಿಗದಿಯಾಗಿದೆ. ಈ ಬಾರಿಯೂ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬರಬೇಕು. ಹಾಗೆಯೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಸವಾಲಾಗಿದೆ. ಇದನ್ನು ಅಧಿಕಾರಿಗಳು ಸಮರ್ಥವಾಗಿ ನಿಭಾಯಿಸಬೇಕು ಎಂದು ಜಿಪಂ ಸಿಇಒ ಎನ್.ಎಂ.ನಾಗರಾಜ್ ತಿಳಿಸಿದರು.
ಜಿಲ್ಲೆಯಲ್ಲಿ ಆನ್‌ಲೈನ್ ಪಾಠ ವ್ಯವಸ್ಥೆ ಹೇಗಿದೆ. ವಿದ್ಯಾರ್ಥಿಗಳ ಸ್ಪಂದನೆ ಹೇಗಿದೆ. ಇದರ ಸಾಧಕ ಬಾಧಕಗಳ ಬಗ್ಗೆ ಗಮನಿಸಬೇಕು ಎಂದು ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಹೇಳಿದರು. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷಾ ಪೂರ್ವ ಸಿದ್ಧತೆಯಾಗಿ ಆನ್‌ಲೈನ್ ಮಾದರಿ ಪ್ರಶ್ನೆ ಪತ್ರಿಕೆ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಸ್ಪಂದಿಸುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ತಿಳಿಸಿದರು.
ಹಾಸ್ಟೆಲ್ಗಳಲ್ಲಿ ಎಚ್ಚರಿಕೆ ಇರಲಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ಹಲವರು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಉಳಿಯಲಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಬಗ್ಗೆ ಮುಂಜಾಗ್ರತೆ ಕೈಗೊಳ್ಳಲು ಸಿಇಒ ಎನ್.ಎಂ ನಾಗರಾಜ್ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಹನುಮಂತರಾಯಪ್ಪಗೆ ಸೂಚಿಸಿದರು.
ಎಷ್ಟು ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಎಸ್ಸೆಸ್ಸೆಲ್ಸಿ ಓದಿ ಪ್ರಸ್ತುತ ಪರೀಕ್ಷೆ ಬರೆಯುತ್ತಿದ್ದಾರೆ ಎಂಬ ಬಗ್ಗೆ ಜಿಪಂ ಅಧ್ಯಕ್ಷೆ ಜಯಮ್ಮ ಮಾಹಿತಿ ಪಡೆದರು. ಎಲ್ಲ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಜತೆಗೆ ಮೂಲಸೌಕರ್ಯ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದರು.
ಕ್ವಾರಂಟೈನ್ ಸಿಬ್ಬಂದಿ ನಿಯೋಜನೆ ಬೇಡ: ವಿದ್ಯಾರ್ಥಿಗಳು ಉಳಿದುಕೊಳ್ಳುವ ಹಾಸ್ಟೆಲ್‌ಗಳಲ್ಲಿ ಈಗಾಗಲೇ ಕ್ವಾರಂಟೈನ್ ಕೇಂದ್ರಗಳಲ್ಲಿ ನಿಯೋಜನೆಗೊಂಡಿರುವ ಯಾವುದೇ ಸಿಬ್ಬಂದಿ ನಿಯೋಜಿಸಬಾರದು ಎಂದು ಕನ್ಯಾಕುಮಾರಿ ಶ್ರೀನಿವಾಸ್ ತಾಕೀತು ಮಾಡಿದರು.
ಹಾಸ್ಟೆಲ್ಗಳನ್ನು ಸಂಪೂರ್ಣ ಸ್ಯಾನಿಟೈಸೇಷನ್ ಮಾಡಬೇಕು. ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಸೇರಿ ಎಲ್ಲ ಅಗತ್ಯ ಮುನ್ನಚ್ಚರಿಕೆ ವಹಿಸಬೇಕು ಎಂದು ಜಿಪಂ ಅಧ್ಯಕ್ಷೆ ಜಯಮ್ಮ ಸೂಚಿಸಿದರು.
ಜಿಲ್ಲೆಯಲ್ಲಿ ಕರೊನಾ ನಿಯಂತ್ರಣ: ಕರೊನಾ ನಿಯಂತ್ರಣದಲ್ಲಿ ಗ್ರಾಮಾಂತರ ಜಿಲ್ಲೆಯ ಆರೋಗ್ಯ ಇಲಾಖೆ ಉತ್ತಮ ಸಾಧನೆ ಮಾಡಿದೆ ಎಂದು ಕೆಡಿಪಿ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಜಿಲ್ಲೆಯಲ್ಲಿ ಪ್ರಸ್ತುತ 20 ಕರೊನಾ ಪ್ರಕರಣಗಳು ಸ್ಥಳೀಯವಾಗಿ ಸಕ್ರಿಯವಾಗಿವೆ. 70 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಂಜುಳಾದೇವಿ ತಿಳಿಸಿದರು.
ಗಟ್ಟಿಯಾಗಿ ಮಾತನಾಡಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಣ್ಣದನಿಯಲ್ಲಿ ಮಾತನಾಡಲು ಮುಂದಾದ ಅಧಿಕಾರಿಗಳನ್ನು ಗಟ್ಟಿಯಾಗಿ ಮಾತನಾಡಿ ಎಂದು ಅಧ್ಯಕ್ಷೆ ಗದರಿಸಿದರು. ಮಾಹಿತಿ ನೀಡುವಾಗ ಸ್ಪಷ್ಟವಾಗಿ ಅರ್ಥವಾಗುವಂತೆ ಮಾತನಾಡಬೇಕು ಇಲ್ಲವಾದರೆ ಸಭೆ ಉದ್ದೇಶವೇ ಫಲಿಸಲ್ಲ ಎಂದು ಎಚ್ಚರಿಕೆ ನೀಡಿದರು.
ಪಾಲಿ ಕ್ಲಿನಿಕ್ ಮುಗಿಯದ ಕಥೆ!: ದೇವನಹಳ್ಳಿಯಲ್ಲಿ ಆರಂಭವಾಗಬೇಕಿದ್ದ ಪಾಲಿಕ್ಲಿನಿಕ್ ಇದುವರೆಗೆ ಯಾವುದೇ ಪ್ರಗತಿ ಕಂಡಿಲ್ಲ. ಜಿಲ್ಲೆಯ ಅವಧಿಯಲ್ಲೇ ತುಮಕೂರಿನಲ್ಲಿ ಅನುಮೋದನೆಗೊಂಡ ಪಾಲಿಕ್ಲಿನಿಕ್ ಈಗಾಗಲೇ ಆರಂಭವಾಗಿದೆ. ಆದರೆ ನಮ್ಮಲ್ಲಿ ಸಾಧ್ಯವಾಗಿಲ್ಲ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷಿನಾರಾಯಣ್ ಪಶುಪಾಲನಾ ಇಲಾಖೆ ವಿರುದ್ಧ ಹರಿಹಾಯ್ದರು.
ಪಂಚಾಯಿತಿ ತಾರತಮ್ಯ: ಜಿಲ್ಲೆಯಲ್ಲಿ ಸಾಕಷ್ಟು ಹಿಂದುಳಿದ ಪಂಚಾಯಿತಿಗಳಿವೆ. ಆದರೆ ಕೋವಿಡ್ ರಿಲ್ೀ ಂಡ್‌ಗೆ ಪಂಚಾಯಿತಿಯೊಂದರಿಂದಲೇ ಕೋಟ್ಯಂತರ ಹಣ ನೀಡಲಾಗಿದೆ. ಅದನ್ನು ಸ್ಥಳೀಯ ಅಭಿವೃದ್ಧಿಗೆ ಬಳಸಿಕೊಳ್ಳಬಹುದಿತ್ತು. ಈ ತಾರತಮ್ಯ ಬೇಡವಾಗಿತ್ತು ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಹೇಳಿದರು.