

ಹಾನಗಲ್ಲ: ಇತ್ತೀಚೆಗೆ ಮಾನವ ಕಳ್ಳ ಸಾಗಾಣಿಕೆ ಹೆಚ್ಚಾಗಿದ್ದು, ಇದಕ್ಕೆ ದುರ್ಬಲ ಸಮುದಾಯದ ಮಹಿಳೆಯರು ಮತ್ತು ಮಕ್ಕಳು ಬಲಿಯಾಗುತ್ತಿದ್ದಾರೆ. ಆರ್ಥಿಕ ಸಮಸ್ಯೆಗೆ ಒಳಗಾಗಿರುವವರನ್ನು ಆಮಿಷಕ್ಕೊಳಪಡಿಸಿ ವಿವಿಧ ದೇಶಗಳಿಗೆ ರವಾನಿಸುವ ಜಾಲಗಳು ಕಂಡುಬರುತ್ತಿವೆ ಎಂದು ಸಿಪಿಐ ಎಸ್.ಆರ್. ಶ್ರೀಧರ ಹೇಳಿದರು.
ಪಟ್ಟಣದ ರೋಶನಿ ಸಮಾಜ ಸೇವಾ ಸಂಸ್ಥೆ ಹಾಗೂ ಕುಮಾರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಬಗ್ಗೆ ಜಾಗರೂಕರಾಗಿರಬೇಕು. ಉದ್ಯೋಗದ ಆಮಿಷ, ಭರವಸೆ ನೀಡಿ ದಾರಿ ತಪ್ಪಿಸುವ ಸಂಸ್ಥೆಗಳು ಕಾರ್ಯನಿರತವಾಗಿವೆ. ಹೆಚ್ಚಿನ ವೇತನ, ಸೌಲಭ್ಯಗಳನ್ನು ನೀಡುವುದಾಗಿ ಸೌದಿ ರಾಷ್ಟ್ರಗಳಿಗೆ ಜನರನ್ನು ಕಳುಹಿಸಿ ಲಾಭಗಳಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಿದ್ಯಾರ್ಥಿಗಳು ಇಂಥದರಲ್ಲಿ ಸಿಲುಕಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಸಿಸ್ಟರ್ ಅನಿತಾ ಡಿಸೋಜಾ ಮಾತನಾಡಿ, ಸಾಮಾಜಿಕ ಜಾಲತಾಣಗಳು ನಮ್ಮ ಜೀವನಕ್ಕೆ ಅಗತ್ಯವಿದ್ದಷ್ಟೇ ಬಳಕೆ ಮಾಡಿಕೊಳ್ಳಬೇಕು. ಜಾಲತಾಣಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಿ ವಿದ್ಯಾರ್ಥಿಗಳು ಬದುಕನ್ನು ಹಾಳು ಮಾಡಿಕೊಳ್ಳಬಾರದು ಎಂದರು.
ಸಿಡಿಪಿಒ ಸಿ. ರಂಗನಾಥ ಮಾತನಾಡಿ, ದೇಶದಲ್ಲಿ ನಡೆಯುವ ಅಕ್ರಮ ಚಟುವಟಿಕೆ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಪ್ರಾಚಾರ್ಯ ಚಿರಂಜೀವಿ ಆಡೂರ, ಉಪನ್ಯಾಸಕರಾದ ಮಾಲತೇಶ ರ್ಬಾ, ಗೋಪಾಲ ಹುನಗನಹಳ್ಳಿ, ಸಿ.ಜಿ. ಶಿವಮೂರ್ತಯ್ಯ, ಎಸ್.ಎಸ್. ಶಾಂತಪುರಮಠ, ಸುಲೇಮಾನ್ ನರಗುಂದ, ರೋಶನಿ ಸಂಸ್ಥೆಯ ಸಂಯೋಜಕಿ ಪ್ರೇಮಾ ಅಟವಾಳಗಿ, ಶಿವಕುಮಾರ ಮಾಂಗ್ಲೇನವರ, ಸಿಬ್ಬಂದಿ ಪವಿತ್ರಾ ಜೋಗೇರ ಉಪಸ್ಥಿತರಿದ್ದರು. ಉಪನ್ಯಾಸಕ ಉಮೇಶ ನಂದಿಕೊಪ್ಪ ನಿರ್ವಹಿಸಿದರು.