

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುಂಗಾರು ಹಂಗಾಮಿನ ಬಿತ್ತನೆಗೆ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಲ್ಲಿ ಆದ್ಯತೆ ಮೇರೆಗೆ ಬಿತ್ತನೆ ಬೀಜ ಖರೀದಿಸುವುದು ಉತ್ತಮ. ಕೇಂದ್ರಗಳಲ್ಲಿ ಲಭ್ಯವಿಲ್ಲದಾಗ ಇಲಾಖೆಯಿಂದ ಮಾರಾಟ ಪರವಾನಗಿ ಹೊಂದಿರುವ ಅಧಿಕೃತ ಮಾರಾಟಗಾರರಿಂದ ಬಿತ್ತನೆ ಬೀಜ ಖರೀದಿಸಬೇಕು. ಬೀಜ ಖರೀದಿಸಿದಾಗ ಅಧಿಕೃತ ರಸೀದಿ ಪಡೆಯಬೇಕಲ್ಲದೆ, ಅದರಲ್ಲಿ ಲಾಟ್ ನಂಬರ್, ಮಾರಾಟ ಬೆಲೆ ವಿವರ ನಮೂದಿಸಿರಬೇಕು. ಮಾರಾಟ ಪರವಾನಗಿ ಹೊಂದಿಲ್ಲದ ಬಿಲ್ ನೀಡದೆ ಇರುವ ಅನ್ಯ ವ್ಯಕ್ತಿಗಳಿಂದ ಬಿತ್ತನೆ ಬೀಜ ಖರೀದಿಸಬಾರದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬಿತ್ತನೆ ಬೀಜ, ದೃಢೀಕರಣ ಬಗ್ಗೆ ಲಗತ್ತಿಸಿರುವ ಟ್ಯಾಗ್ಗಳನ್ನು ಬೆಳೆ ಕಟಾವು ಆಗುವವರೆಗೆ ಸುರತವಾಗಿ ಕಾಯ್ದಿಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಬೆಳೆ ಹಾನಿ ಉಂಟಾದಾಗ ಮಾರಾಟಗಾರರು, ಉತ್ಪಾದಕರ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಬಹುದು. ಬಿತ್ತನೆ ಬೀಜದ ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸ ಗಮನಿಸಬೇಕು. ಬಿತ್ತನೆ ಬೀಜವು ಸಂಬಂಧಪಟ್ಟ ಪ್ರಾಧಿಕಾರದಿಂದ ಪರೀಸಲ್ಪಟ್ಟು ಗುಣಮಟ್ಟದ ಬಗ್ಗೆ ದೃಢೀಕರಿಸಲಾಗಿದೆಯೇ? ದೃಢೀಕರಣ ಟ್ಯಾಗ್ ಲಗತ್ತಿಸಲಾಗಿದೆಯೇ? ಎಂದು ರೈತರು ಖಾತರಿಪಡಿಸಿಕೊಳ್ಳುಬೇಕು.
ಬಿತ್ತನೆಗೆ ಮುಂಚೆ ಬೀಜ ಮೊಳೆಯುವಿಕೆ ಪ್ರಮಾಣ ಪರೀಸಬೇಕು. ನಮೂದಿಸಿರುವ ಉತ್ಪಾದನಾ ದಿನಾಂಕ ಮತ್ತು ಬಳಕೆಗೆ ಯೋಗ್ಯದ (ವ್ಯಾಲಿಡಿಟಿ) ಅವಧಿ ಗಮನಿಸಬೇಕು. ಚಿಲ್ಲರೆ ಮಾರಾಟಗಾರಿಂದ ಬಿತ್ತನೆ ಬೀಜಗಳ ಖರೀದಿ ಮಾಡಬಾರದು. ಹೆಚ್ಚಿನ ಮಾಹಿತಿಗೆ ಇಲಾಖೆ ಕಚೇರಿ ಸಂಪಕಿರ್ಸಬಹುದು ಎಂದು ಕಿರಣಕುಮಾರ ತಿಳಿಸಿದ್ದಾರೆ.