ಬಿತ್ತನೆ ಬೀಜ ಖರೀದಿಸುವಾಗ ಎಚ್ಚರವಹಿಸಿ

SEEDS
Published on

ಪಾಂಡವಪುರ: ತಾಲೂಕಿನಾದ್ಯಂತ ಮುಂಗಾರು ಮಳೆ ಆರಂಭವಾಗಿದ್ದು, ರೈತರು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕಗಳನ್ನು ಖರೀದಿಸುವ ವೇಳೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಸ್.ಮಂಜುನಾಥ್ ತಿಳಿಸಿದರು.

ರೈತರು ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿಸಿ ಲಾಟ್ ನಂಬರ್ ನಮೂದಿಸಿದ ರಶೀದಿ ಪಡೆದುಕೊಳ್ಳಬೇಕು. ಬಿತ್ತನೆ ಬೀಜ ಉತ್ಪಾದಕರು ಮತ್ತು ಮಾರಾಟಗಾರರ ವಿಳಾಸವನ್ನು ಗಮನಿಸಬೇಕು. ಬಿತ್ತನೆ ಬೀಜ ಸಂಬಂಧಪಟ್ಟ ಪ್ರಾಧಿಕಾರದಿಂದ ಪರೀಕ್ಷಿಸಲ್ಪಟ್ಟು ಗುಣಮಟ್ಟದ ದೃಢೀಕರಿಸಲಾಗಿದಿಯೇ ಮತ್ತು ದೃಢೀಕರಿಸಿದ ಟ್ಯಾಗ್‌ಗಳನ್ನು ಲಗತ್ತಿಸಲಾಗಿದ್ದಿಯೇ ಎಂಬಿತ್ಯಾದಿ ವಿಚಾರಗಳನ್ನು ಖರೀದಿಗೂ ಮುನ್ನ ಖಾತರಿಪಡಿಸಿಕೊಳ್ಳಬೇಕು. ಟ್ಯಾಗ್‌ಗಳನ್ನು ಬೆಳೆ ಕಟಾವಿನವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಉತ್ಪಾದನಾ ದಿನಾಂಕ ಮತ್ತು ವ್ಯಾಲಿಡಿಟಿ ಅವಧಿಯನ್ನು ರೈತರು ತಿಳಿಯುವುದು ಉತ್ತಮ. ಅಧಿಕೃತ ಪರವಾನಗಿ ಹೊಂದಿರುವ ಮಾರಾಟಗಾರರಿಂದಲೇ ರಸಗೊಬ್ಬರ ಖರೀದಿಸಬೇಕು. ಗೊಬ್ಬರದ ಚೀಲದ ಬಾಯಿಯನ್ನು ಯಂತ್ರದಿಂದ ಹೊಲಿದಿರುವುದನ್ನು ಗಮನಿಸಬೇಕು. ಚೀಲದ ಮೇಲೆ ನಮೂದಿಸಿರುವ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆ ನೀಡಬಾರದು. ಖರೀದಿಗೆ ರಶೀದಿ ಪಡೆಯಬೇಕು. ಚೀಲದ ಮೇಲೆ ರಸಗೊಬ್ಬರದ ಬ್ರ್ಯಾಂಡ್, ತಯಾರಕರ ಹೆಸರು ಗೊಬ್ಬರದಲ್ಲಿರುವ ಪೋಷಕಾಂಶಗಳ ವಿವರ, ತಯಾರಿಸಿದ ವರ್ಷ ಮತ್ತು ತಿಂಗಳನ್ನು ಪರಿಶೀಲಿಸಿದ ನಂತರವೇ ಖರೀದಿ ಮಾಡಬೇಕು. ಪೀಡೆ ನಾಶಕಗಳನ್ನು ಕೂಡ ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು. ಬಾಟಲಿ ಮತ್ತು ಪೊಟ್ಟಣ ತೆರೆಯಲಾಗಿದಿಯೇ ಎಂಬ ಇತ್ಯಾದಿ ಅಂಶಗಳನ್ನು ಗಮನಿಸುವ ಜತೆಗೆ ಅವಧಿ ಮೀರಿರುವ ಪೀಡೆನಾಶಕಗಳನ್ನು ಖರೀಸದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net