ಡೆಂಘೆ, ಇಲಿ ಜ್ವರ ಹರಡದಂತೆ ಎಚ್ಚರವಹಿಸಿ

Kumata Taluk Panchayat Meeting
Published on

ಕುಮಟಾ: ತಾಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲೂಕು ಪಂಚಾಯಿತಿ ಮಾಸಿಕ ಸಾಮಾನ್ಯ ಸಭೆ ಅಡಳಿತಾಧಿಕಾರಿ ಎನ್.ಜಿ. ನಾಯಕ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿತು.

ಸಭೆಯಲ್ಲಿ ಪ್ರಗತಿ ವರದಿ ಮಂಡಿಸಿದ ತಾಲೂಕು ಆರೋಗ್ಯಾಧಿಕಾರಿ ಆಜ್ಞಾ ನಾಯಕ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲೂ ಡೆಂಘೆ, ಇಲಿ ಜ್ವರ ಮುಂತಾದವು ಕಾಣಿಸಿಕೊಳ್ಳುತ್ತಿವೆ. ಕೆಲ ದಿನಗಳಿಂದ ಮಳೆ ಇಲ್ಲದಿರುವುದರಿಂದ ಇಲಿಗಳು ಗದ್ದೆ, ತೋಟ ಹಾಗೂ ಜನವಸತಿಯೊಳಗೆ ಓಡಾಡುವುದು ಹೆಚ್ಚಾಗಿ ಸೋಂಕು ಪಸರಿಸಲು ಕಾರಣವಾಗಿರಬಹುದು.

ಡಯಾಬಿಟಿಸ್, ಬಿಪಿ ಇರುವವರು, ಮದ್ಯಸೇವನೆ ಚಟ ಇರುವವರಿಗೆ ಇಲಿ ಜ್ವರ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಜನರು ಎಚ್ಚರವಹಿಸಬೇಕು ಎಂದರು.

ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುಮಲತಾ ಮಾತನಾಡಿ, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಘಟಕದಲ್ಲಿ ಒಟ್ಟು 865 ಪ್ರಕರಣಗಳಿಗೆ ಚಿಕಿತ್ಸೆ ನೀಡಿದ್ದೇವೆ. ಇದರಲ್ಲಿ ರಸ್ತೆ ಅಪಘಾತಗಳ ಸಂಖ್ಯೆ 133. ಇದರಲ್ಲಿ 40 ಪ್ರಕರಣಗಳನ್ನು ಬೇರೆಡೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಿದ್ದೇವೆ. ಆಸ್ಪತ್ರೆಯಲ್ಲಿ 4 ಡಯಾಲಿಸಿಸ್ ಯಂತ್ರಗಳಿದ್ದು ಇನ್ನೂ ಒಂದು ಬರಬೇಕಿದೆ ಎಂದರು.

ಕೃಷಿ ಅಧಿಕಾರಿ ಚಂದ್ರಕಲಾ ಪಟಗಾರ ಖಜಾನೆಯಿಂದ ಸಂಬಳ ಬಟವಡೆ ಆಗದಿರುವ ಕುರಿತು ಗಮನ ಸೆಳೆದರು. ಉಳಿದಂತೆ ಸಭೆಯಲ್ಲಿ ಹಲವು ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು. ತಾಪಂ ಪ್ರಭಾರ ಇಒ ನಾಗರತ್ನಾ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net