ನೀರಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಿ

1Raibag1
Published on

ರಾಯಬಾಗ: ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಮಾತನಾಡಿ, ಬಹು ಕುಡಿಯುವ ನೀರಿನ ಯೋಜನೆ ವ್ಯಾಪ್ತಿಯಲ್ಲಿರುವ ಗ್ರಾಮಗಳಿಗೆ ಸರಿಯಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕೆಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತಗೆ ಸೂಚಿಸಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ ಮಿಷನ್ ಯೋಜನೆ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸುವಂತೆ ಪಂಚಾಯತ್‌ರಾಜ್ ಇಲಾಖೆ ಎಇಇ ಸುಭಾಷ ಭಜಂತ್ರಿಗೆ ಹೇಳಿದರು.

ಕೆರೆಯಲ್ಲಿ ನೀರು ಇದ್ದರೂ, ಪಟ್ಟಣದ ಜನರಿಗೆ 7 ದಿನಗಳಿಗೆ ಒಮ್ಮೆ ನೀರು ಬಿಡುತ್ತಿರುವುದಾಗಿ ಪಪಂ ಅಧ್ಯಕ್ಷ ಅಶೋಕ ಅಂಗಡಿ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿಗಳು ಈ ಮೊದಲು ಹೆಸ್ಕಾಂದವರು ಜಾಕ್‌ವೆಲ್‌ಗೆ ಪ್ರತ್ಯೇಕ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದರು. ಈಗ ಅದಕ್ಕೆ ಪ್ರತ್ಯೇಕ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದರಿಂದ ತೊಂದರೆಯಾಗುತ್ತಿದೆ ಎಂದರು.

ಪ್ರತಿಯೊಂದಕ್ಕೂ ಹಾರಿಕೆ ಉತ್ತರ ನೀಡುವುದಾದರೆ ಸಭೆಗೆ ಬರಬೇಡಿ ಎಂದು ಶಾಸಕ ಡಿ.ಎಂ.ಐಹೊಳೆ ಹೆಸ್ಕಾಂ ಎಇಇ ಕದಂ ಅವರನ್ನು ತರಾಟೆಗೆ ತೆಗೆದುಕೊಂಡರು. ಬೇಸಿಗೆ ಸಮಯದಲ್ಲಿ ಜಲಮೂಲಗಳಿಗೆ ಸಮರ್ಪಕ ವಿದ್ಯುತ್ ನೀಡಬೇಕು. ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಬೇಕು ಮತ್ತು ನೀರಿನ ತೊಂದರೆ ಇರುವಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಮುಂಚಿತವಾಗಿ ಜಲಮೂಲಗಳ ಮಾಹಿತಿ ಸಂಗ್ರಹಿಸುವಂತೆ ತಹಸೀಲ್ದಾರ್ ಸುರೇಶ ಮುಂಜೆ ಪಿಡಿಒಗಳಿಗೆ ಸೂಚಿಸಿದರು.

ತಾಪಂ ಇಒ ಡಾ.ಸುರೇಶ ಕದ್ದು, ಪಪಂ ಅಧ್ಯಕ್ಷ ಅಶೋಕ ಅಂಗಡಿ, ಮುಖ್ಯಾಧಿಕಾರಿ ಎಸ್.ಆರ್.ಮಾಂಗ, ಚಿಂಚಲಿ ಪಪಂ ಮುಖ್ಯಾಧಿಕಾರಿ ವಿ.ಬಿ.ಬಳ್ಳಾರಿ, ಎಇಇ ಸುಭಾಷ ಭಜಂತ್ರಿ, ಸೋಮಶೇಖರ ಜೋರೆ, ಎಂ.ವಿ.ರಾಠೋಡ, ಲೋಹಿತ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net