ಕಾಮಗಾರಿಯಲ್ಲಿ ಲೋಪವಾಗದಂತೆ ಎಚ್ಚರವಹಿಸಿ

20
Published on

ಮೈಸೂರು: ಜಲ ಜೀವನ್‌ಮಿಷನ್ ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್‌ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂಜನಗೂಡು ತಾಲೂಕಿನ ತಾಂಡವಪುರ, ಸುತ್ತೂರು, ಹದಿನಾರು ಗ್ರಾಮ ಪಂಚಾಯಿತಿ ಹಾಗೂ ತಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಮೋಳೆ, ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಕೆಂಪಯ್ಯನಹುಂಡಿ ಗ್ರಾಮಗಳಿಗೆ ಭೇಟಿ ನೀಡಿ ಅವರು ಪರಿಶೀಲಿಸಿದರು.

ನಂಜನಗೂಡು ತಾಲೂಕು ತಾಂಡವಪುರ ಮತ್ತು ಇತರೆ 31 ಜನ ವಸತಿಗಳಿಗೆ ಡಿಬಿಒಟಿ ಆಧಾರಿತ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಯ ಪರಿಶೀಲನೆ ನಡೆಸಿ, ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ತಿ. ನರಸೀಪುರ ತಾಲೂಕಿನ ಸೋಸಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಮೋಳೆ ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿ ಪರಿಶೀಲಿಸಿದರು. ಅಲ್ಲದೇ ಗರ್ಭಿಣಿಯರಿಗೆ ನಿಗಧಿತ ಸಮಯದಲ್ಲಿ ಆಹಾರ ಪೂರೈಸಲು ಮೇಲ್ವಿಚಾರಕರಿಗೆ ನಿರ್ದೇಶನ ನೀಡಿದರು. ಜೆ.ಜೆ.ಎಂ. ಯೋಜನೆಯ ಅರ್ಥ್ ವರ್ಕಿಂಗ್ ಪರಿಶೀಲಿಸಿದರು. ಬಳಿಕ ಸುತ್ತಮುತ್ತಲ ಮನೆಗಳಿಗೆ ತೆರಳಿ ಜೆಜೆಎಂ ಯೋಜನೆಯಲ್ಲಿ ಅಳವಡಿಸಲಾಗಿರುವ ಕೊಳಾಯಿ (ನಲ್ಲಿ)ಯಲ್ಲಿ ಬರುವ ನೀರಿನ ತೀವ್ರತೆಯನ್ನು ವೀಕ್ಷಿಸಿದರು. ಗ್ರಾಮಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಬೇಕು. ಟ್ಯಾಂಕ್‌ಗಳನ್ನು ಸ್ವಚ್ಚ ಮಾಡಿದ ದಿನಾಂಕವನ್ನು ಕಡ್ಡಾಯವಾಗಿ ಗೋಡೆ ಮೇಲೆ ಬರೆಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯ ಪಾಲಕ ಇಂಜಿನಿಯರ್ ರಂಜಿತ್‌ಕುಮಾರ್, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್, ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net