ಸಿಎಂ ಕಾರ್ಯಕ್ರಮದಲ್ಲಿ ಲೋಪವಾಗದಂತೆ ಮುಂಜಾಗ್ರತೆ ವಹಿಸಿ

SRP_23-02jpj
ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಗ್ರಾಮದ ಶ್ರೀ ಅನ್ನದಾನೇಶ್ವರ ದೇವಾಲಯಕ್ಕೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರು ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ ಹಾಗೂ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಮತ್ತು ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on

ಶ್ರೀರಂಗಪಟ್ಟಣ: ಕುಲದೈವದ ದೇಗುಲ ಉದ್ಘಾಟನೆಗೆ ಮೇ 2ರಂದು ತಾಲೂಕಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಯಾವುದೇ ಲೋಪ ಆಗದಂತೆ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆಯೊಂದಿಗೆ ಎಚ್ಚರವಹಿಸಬೇಕು ಎಂದು ಸೆಸ್ಕ್ ಅಧ್ಯಕ್ಷ, ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸೂಚನೆ ನೀಡಿದರು.

ತಾಲೂಕಿನ ಅಲ್ಲಾಪಟ್ಟಣ ಗ್ರಾಮದಲ್ಲಿ ಜೀರ್ಣೋದ್ಧಾರವಾಗಿರುವ ಶ್ರೀ ಅನ್ನದಾನೇಶ್ವರ(ಬೀರೇಶ್ವರ) ದೇವಾಲಯಕ್ಕೆ ಬುಧವಾರ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಪಂ ಸಿಇಒ ಕೆ.ಆರ್.ನಂದಿನಿ, ವಿವಿಧ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ತಾಲೂಕಿನ ಅಲ್ಲಾಪಟ್ಟಣ ಗ್ರಾಮದಲ್ಲಿನ ಅನ್ನದಾನೇಶ್ವರ ದೇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಕುಲದೈವದ ಮೂಲ ನೆಲೆಯಾಗಿದೆ. ಈ ದೈವ ಇಲ್ಲಿಂದ ಮೈಸೂರು ತಾಲೂಕಿನ ಸಿಎಂ ತವರು ಸಿದ್ದರಾಮನಹುಂಡಿಗೆ ಬಂದು ನೆಲೆಸಿರುವ ಇತಿಹಾಸವಿದೆ. ದೇಗುಲದ ವ್ಯವಸ್ಥಾಪನಾ ಸಮಿತಿ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಶಿಥಿಲಗೊಂಡಿದ್ದ ಈ ದೇಗುಲವನ್ನು ಈಗ ಜೀರ್ಣೋದ್ಧಾರಗೊಳಿಸಿದ್ದಾರೆ. ಈ ದೇಗುಲದ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರೇ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸರ್ಕಾರದ ಹಲವು ಜನಪ್ರತಿನಿಧಿಗಳು ಆಗಮಿಸುವ ನಿರೀಕ್ಷೆ ಇದ್ದು, ದೇಗುಲ ಸೇರಿದಂತೆ ಸುತ್ತಮುತ್ತ ಸ್ವಚ್ಛತೆ ಹಾಗೂ ಕುಡಿಯುವ ನೀರು, ಶೌಚಗೃಹ, ವೈದ್ಯಕೀಯ ವ್ಯವಸ್ಥೆ ಕೈಗೊಳ್ಳಬೇಕು. ಸುಮಾರು 15 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ವಿಶಾಲವಾದ ಬಯಲಿನಲ್ಲಿ ನೆರಳು ಸಹಿತ ವೇದಿಕೆ ನಿರ್ಮಾಣ, ಆಸನಗಳ ವ್ಯವಸ್ಥೆ, ಆಹಾರ ವಿತರಣೆ ಸ್ಥಳದಲ್ಲಿ ಜನದಟ್ಟಣೆ ಉಂಟಾಗದಂತೆ ಕ್ರಮಕೈಗೊಳ್ಳಬೇಕು ಎಂದರು.

ಅಲ್ಲಾಪಟ್ಟಣ ಗ್ರಾಮಕ್ಕೆ ಸಂಪರ್ಕ ನೀಡುವ ಬೆಂಗಳೂರು-ಮೈಸೂರು ಹೆದ್ದಾರಿಯ ಟಿ.ಎಂ.ಹೊಸೂರು ಗೇಟ್ ಹಾಗೂ ಬನ್ನೂರು-ಶ್ರೀರಂಗಪಟ್ಟಣ ಹೆದ್ದಾರಿಯ ಕರಿಘಟ್ಟ ರಸ್ತೆಯಿಂದ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವ ಜತೆಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಮುಂಜಾಗ್ರತೆ ವಹಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ಅಥವಾ ರಸ್ತೆ ಮಾರ್ಗದಲ್ಲಾದರೂ ಆಗಮಿಸಬಹುದು. ಜಿಲ್ಲಾಡಳಿತ ಸೂಕ್ತ ಸ್ಥಳದಲ್ಲಿ ಹೆಲಿಪ್ಯಾಡ್ ನಿರ್ಮಿಸಬೇಕು, ಜತೆಗೆ ರಸ್ತೆ ಮಾರ್ಗದಲ್ಲಿ ಆಗಮಿಸಿದರೆ ಅದಕ್ಕೆ ಪೂರಕ ವ್ಯವಸ್ಥೆ ಕೈಗೊಂಡಿರಬೇಕು. ಜಿಲ್ಲಾ ಪೊಲೀಸ್ ಇಲಾಖೆ ಸಂಚಾರ ದಟ್ಟಣೆ ಹಾಗೂ ಭದ್ರತಾ ಲೋಪ ಎದುರಾಗದಂತೆ ಎಚ್ಚರವಹಿಸಬೇಕು ಎಂದರು.

ಜಿಲ್ಲಾ ಪೊಲೀಸ್ ಅಪರ ವರಿಷ್ಠಾಧಿಕಾರಿ ತಿಮ್ಮಯ್ಯ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಆನಂದ್ ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಜಸ್ವಂತ್ ಪಂಡಿತ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಂದೇಶ್, ಮುಖಂಡರಾದ ವಿಶ್ವನಾಥ್, ಟಿ.ಎಂ.ಹೊಸೂರು ನಟರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net