ಆದಾಯ ಪೋಲಾಗದಂತೆ ಎಚ್ಚರ ವಹಿಸಿ

27 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ ಸದ್ಯ ನಡೆಸಿರುವ ಆಸ್ತಿ ಸಮೀಕ್ಷೆ ತಾಂತ್ರಿಕವಾಗಿ ಸರಿ ಇಲ್ಲ. ಹೆಸ್ಕಾಂದಿಂದ ಮೀಟರ್​ ನೀಡಿರುವ ಮನೆಗಳ ಸಂಖ್ಯೆಗೂ ಮತ್ತು ಎಚ್​ಡಿಎಂಸಿ ಆಸ್ತಿ ಸಂಖ್ಯೆಗೂ ವ್ಯತ್ಯಾಸವಿದೆ. ಈ ಕುರಿತು ಕ್ರಮವಹಿಸಿ. ಸಮನ್ವಯತೆ ಸಾಧಿಸಿ, ಪ್ರತಿ ಆಸ್ತಿಗೂ ಟ್ಯಾಕ್ಸ್​ ಬರುವಂತೆ ಕ್ರಮವಹಿಸಬೇಕು ಎಂದು ಸಚಿವ ಸಂತೋಷ ಲಾಡ್​ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಹು-ಧಾ ಮಹಾನಗರ ಪಾಲಿಕೆ ಹಾಗೂ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪಾಲಿಕೆಯಿಂದ ವಿವಿಧ ಉದ್ದೇಶಗಳಿಗೆ ಬಹಳ ವರ್ಷಗಳ ಹಿಂದೆ 999 ವರ್ಷ, 99 ವರ್ಷ ವರ್ಷಗಳ ಅವಧಿಗೆ ಸುಮಾರು 2,474 ಪಾಲಿಕೆ ಆಸ್ತಿಗಳನ್ನು ಲೀಜ್​ ಕೊಡಲಾಗಿದೆ. ಇದನ್ನು ಕೆಲವರು ನಿಯಮ ಬಾಹಿರವಾಗಿ ಮತ್ತೊಬ್ಬರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಈ ಕುರಿತು ಪರಿಶೀಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದರು.

ಕರ ವಸೂಲಾತಿ ಪ್ರಗತಿ ಆಗಬೇಕು. ಸುಮಾರು 45 ಸಾವಿರಕ್ಕೂ ಅಧಿಕವಾಗಿ ಅನಧೀಕೃತ ಸೈಟ್​ ನಿರ್ಮಾಣವಾಗಿವೆ. ಇವುಗಳಿಂದ ನಾಗರಿಕ ಸವಲತ್ತು, ಮೂಲ ಸೌಕರ್ಯ ನೀಡಲು ಸಮಸ್ಯೆಗಳು ಆಗುತ್ತಿವೆ. ಪ್ರತಿ ಆಸ್ತಿಯೂ ಟ್ಯಾಕ್ಸ್​ ವ್ಯಾಪ್ತಿಗೆ ಒಳಪಡಿಸಬೇಕು. ಪ್ರತಿ ವಲಯದಲ್ಲಿ ಈ ಕುರಿತು ಅಭಿಯಾನ ಆಗಬೇಕು ಎಂದರು.

ನಗರದಲ್ಲಿನ ಅನಧಿಕೃತ ಪಿಜಿಗಳ ಬಗ್ಗೆ ವಲಯ ಸಹಾಯಕ ಆಯುಕ್ತರು ತಮ್ಮ ವಲಯದ ವಾರ್ಡ್​ಗಳಲ್ಲಿ ಸಮೀಕ್ಷೆ ಮಾಡಿ ಪಿಜಿಗಳು ಎಷ್ಟಿವೆ, ಎಷ್ಟು ಜನ ವಾಸಿಸುತ್ತಿದ್ದಾರೆ, ಮಾಲೀಕರು, ಪಿಜಿ ವಾಸಿಗಳ ವೈಯಕ್ತಿಕ ವಿವರ ಪಡೆದಿರುವ ಬಗ್ಗೆ, ಸುರಕ್ಷತೆ, ವಾಣಿಜ್ಯ ಬಳಕೆಗೆ ವಿದ್ಯತ್​, ವಾಣಿಜ್ಯ ತೆರಿಗೆ ಭರಿಸುತ್ತಿರುವ ಬಗ್ಗೆ ನಿಗದಿತ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಬೇಕು. ಅನಧೀಕೃತ ಪಿಜಿಗಳಿಗೆ ತಕ್ಷಣ ನೋಟಿಸ್​ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿದರು. ಪಾಲಿಕೆ ಮೇಯರ್​ ರಾಮಣ್ಣ ಬಡಿಗೇರ, ಹುಡಾ ಅಧ್ಯಕ್ಷ ಶಾಕೀರ ಸನದಿ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net