

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಕ್ಟೋಬರ್ನಲ್ಲಿ ಸುರಿದ ಮಳೆಯಿಂದಾದ ಬೆಳೆ ಹಾನಿ ಸಮೀಕ್ಷೆಯಲ್ಲಿ ಅನರ್ಹರು ಸೇರ್ಪಡೆ ಆಗದಂತೆ ಹಾಗೂ ಅರ್ಹ ರೈತರು ಹೊರಗುಳಿಯದಂತೆ ಅಧಿಕಾರಿ, ಸಿಬ್ಬಂದಿ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳೆ ಹಾನಿ ಸಮೀಕ್ಷೆ ವರದಿಯನ್ನು ನಾಳೆಯೊಳಗೆ ಆನ್ಲೈನ್ ಮೂಲಕ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು. ಪ್ರಕಟಿತ ಸಮೀಕ್ಷೆ ವರದಿ ಪ್ರತಿಯನ್ನು ಆಯಾ ತಾಲೂಕಿನ ತಹಸೀಲ್ದಾರ, ಸಹಾಯಕ ಕೃಷಿ ನಿರ್ದೇಶಕರ, ತೋಟಗಾರಿಕೆ ಇಲಾಖೆ ಕಚೇರಿಗಳಲ್ಲಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪ್ರದಶಿರ್ಸಬೇಕು. ಗ್ರಾಪಂ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಡಂಗೂರ ಸಾರಿ ರೈತ ಕುಟುಂಬಗಳಿಗೆ ಸಮೀಕ್ಷೆ ಕೈಗೊಂಡ ಕುರಿತು ಮತ್ತು ರೈತರ ಹೆಸರು, ವಿವರ ಪರಿಶೀಲಿಸಿ ಆಕ್ಷೆಪಣೆಗಳಿದ್ದಲ್ಲಿ ಸಲ್ಲಿಸಲು ಮಾಹಿತಿ ನೀಡಬೇಕು ಎಂದರು.
ವರದಿ ಪ್ರಕಟ ಬಳಿಕ ರೈತರು ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಕೃಷಿ ಇಲಾಖೆ ಅಧಿಕಾರಿಗಳು, ತಹಸೀಲ್ದಾರರು ಕ್ರಮವಹಿಸಿ, ಅಂತಿಮ ಸಮೀಕ್ಷಾ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಬಿ.ಎಸ್.ಮುಗನೂರಮಠ, ಶಾಲಂ ಹುಸೇನ್, ಅಜೀಜ್ ದೇಸಾಯಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಎಚ್.ಎಚ್. ಕುಕನೂರ, ತಹಸೀಲ್ದಾರರು, ತಾಪಂ ಇಒಗಳು, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಇದ್ದರು.