

ಆಲಮೇಲ: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಗೆ ನೀಡಿದರು.
ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ಹಮ್ಮಿಕೊಂಡ ಎರಡನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ನಿತ್ಯ ತಾಪಮಾನ ಏರುತ್ತಿದೆ. ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಬೇಕು. ಒಂದು ವೇಳೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಅಂತವರ ಮೇಲೆ ಕ್ರಮ ಅನಿವಾರ್ಯ ಎಂದರು.
ಈಗಾಗಲೇ ಪಟ್ಟಣದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಟೆಂಡರ್‌ಗಳ ಮೂಲಕ ಕೆಲಸ ಆರಂಭಿಸಲಾಗಿದೆ. ಇನ್ನೂ ಕೆಲವು ಕಾಮಗಾರಿಗಳನ್ನು ವಿಳಂಬ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ವಾರದೊಳಗೆ ಬಾಕಿ ಕಾಮಗಾರಿ ಆರಂಭಿಸದಿದ್ದಲ್ಲಿ ಟೆಂಡರ್ ರದ್ದುಗೊಳಿಸಲಾಗುವುದು. ಪಟ್ಟಣದಲ್ಲಿ ಕಾಯಿಪಲ್ಲೆ ಮಾರುಕಟ್ಟೆಗಾಗಿ ಪಪಂ ಅಧಿಕಾರಿಗಳು ಕೂಡಲೇ ಜಾಗದ ಅಳತೆ ಮಾಡಿಸಿ ಸೂಕ್ತ ದಾಖಲಾತಿಗಳನ್ನು ಸಿದ್ಧಪಡಿಸಿ ಶೀಘ್ರ ಮಾರುಕಟ್ಟೆ ಆರಂಭಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು. ಅಲ್ಲದೆ, ಶೀಘ್ರ ಗ್ರಂಥಾಲಯವನ್ನೂ ಆರಂಭಿಸಲಾಗುವುದು ಎಂದು ತಿಳಿಸಿದರು.
ಪಪಂ ಅಧ್ಯಕ್ಷ ಸಾಧಿಕ ಸುಂಬಡ ಮಾತನಾಡಿ, ಶಾಸಕರ ಸಹಕಾರದಿಂದ ಪಟ್ಟಣ ಅಭಿವೃತ್ತ ಸಾಗುತ್ತಿದೆ. ಇದಕ್ಕೆ ಪಪಂ ಸದಸ್ಯರ ಸಹಕಾರವೂ ಬಹಳಷ್ಟಿದೆ. ಇಲ್ಲ ಸದಸ್ಯರ ಒಮ್ಮತದ ಅಭಿಪ್ರಾಯದೊಂದಿಗೆ ಪಟ್ಟಣದ ದೇವರ ಅಗಸಿ ಹತ್ತಿರ ದಿ.ಎಂ.ಸಿ. ಮನಗೂಳಿ ಅವರ ಪುತ್ಥಳಿ ನಿರ್ಮಿಸಲು ಸರ್ವ ಸದಸ್ಯರ ಸರ್ವಾನುಮತದಿಂದ ಇಂದು ಈ ನಿರ್ಣಯ ಕೈಗೊಳ್ಳಲಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿ ಎಂದು ತಿಳಿಸಿದರು.
ವಾರ್ಡ್ ನಂ. 1 ರ ಸದಸ್ಯ ಡಾ. ಸಂಜೀವಕುಮಾರ ಯಂಟಮಾನ ಶಾಸಕರ ಕಾಲಿಗೆ ಬಿದ್ದು, ರುಕುಂಪುರ ರಸ್ತೆ ಸಂಪೂರ್ಣ ಅತಿಕ್ರಮಣಗೊಂಡಿದ್ದು, ಕೂಡಲೇ ಅತಿಕ್ರಮಣ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಪಟ್ಟಣದ ಹಜರತ್‌ಪೀರ ಗಾಲೀಬ ಶಹೀದ್ ದರ್ಗಾಕ್ಕೆ ಬೇರೆ ರಾಜ್ಯದಿಂದ ಭಕ್ತರು ಆಗಮಿಸುತ್ತಿದ್ದು, ರಸ್ತೆ ಅತಿಕ್ರಮಣದಿಂದ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ, ವಿನಾಯಕ ನಗರ, ಗಣೇಶ ನಗರ, ಬಸವ ನಗರದ ಹಿಂದುಗಳು ಸ್ಮಶಾನಕ್ಕೆ ತೆರಳುತ್ತಾರೆ. ಅವರಿಗೆ ಸರಿಯಾದ ರಸ್ತೆ ಇಲ್ಲದೆ ಪರದಾಡುವಂತಾಗಿದೆ. ಈ ಕುರಿತು ಹಲವಾರು ಬಾರಿ ಅಧಿಕಾರಿಗಳು ಹಾಗೂ ತಮಗೂ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಉಪಾಧ್ಯಕೆ ಸುಮಾ ಕತ್ತಿ, ಎಲ್ಲ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.