ಪರಿಸರಕ್ಕೆ ಹಾನಿಯಾಗದಂತೆ ಜಾಗ್ರತೆ

Be careful not to harm the environment
Published on

ಮಡಿಕೇರಿ:

ಮೈಸೂರು-ಮಂಗಳೂರು ಇಕನಾಮಿಕಲ್ ಕಾರಿಡಾರ್ ರಸ್ತೆಯನ್ನು ೨ ಲೇನ್‌ನಿಂದ ೪/೬ ಲೇನ್‌ಗಾಗಿ ಅಗಲೀಕರಣ ಮತ್ತು ಉನ್ನತೀಕರಣದ ಯೋಜನೆಯ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಸೂಕ್ಷ್ಮ ಪರಿಸರ ಹೊಂದಿರುವ ಕೊಡಗಿನಲ್ಲಿ ಕಾಮಗಾರಿ ಸಂದರ್ಭ ಜಾಗರೂಕತೆ ವಹಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಕಾಮಗಾರಿಯ ಭೂಸ್ವಾಧೀನ ಅಧಿಕಾರಿ ಎಚ್.ಎನ್. ಶಿವೇಗೌಡ ಹೇಳಿದರು. ಯೋಜನೆಯ ಕಾಮಗಾರಿ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ಪರಿಸರ ವಿಮೋಚನಾ ಪತ್ರ ಪಡೆಯುವ ಸಲುವಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಮೈಸೂರಿನಿಂದ ಕುಶಾಲನಗರ ತನಕ ನಡೆಯುವ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಮತ್ತು ಉನ್ನತೀಕರಣದ ಯೋಜನೆಯ ಒಟ್ಟು ೯೨.೩೫೫ ಕಿಮೀ ಕಾಮಗಾರಿ ಪೈಕಿ ಕೊಡಗಿನಲ್ಲಿ ೨.೩ ಕಿಮೀ ಕಾಮಗಾರಿ ನಡೆಯಲಿದೆ. ಕಾಮಗಾರಿಗಾಗಿ ಜಿಲ್ಲೆಯಲ್ಲಿ ೧೩.೭೪ ಹೆಕ್ಟೇರ್ ಭೂಮಿಯ ಅಗತ್ಯವಿದೆ. ೧ ಹಳ್ಳಿಯ ೫೦ ಕುಟುಂಬಗಳು ಈ ಕಾಮಗಾರಿಯ ಪ್ರಭಾವಕ್ಕೆ ಒಳಗಾಗಲಿವೆ. ೨೫ ಕಟ್ಟಡಗಳು ಅಥವಾ ಆಸ್ತಿಪಾಸ್ತಿಗಳು ಹಾನಿಗೀಡಾಗಲಿವೆ.

ಭೂಮಿ ಕಳೆದುಕೊಳ್ಳುವವರಿಗೆ ಸರ್ಕಾರ ವೈಜ್ಞಾನಿಕವಾಗಿ ಸಿದ್ಧಪಡಿಸಿರುವ ಮಾರ್ಗಸೂಚಿಯಡಿ ಉತ್ತಮ ಮೊತ್ತದ ಪರಿಹಾರ ನೀಡಲಾಗುವುದು. ಭೂಮಿಯ ಮೌಲ್ಯಮಾಪನ ಮಾಡುವಲ್ಲಿ ಅಥವಾ ಪರಿಹಾರ ನಿಗದಿ ಮಾಡುವಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಬಹುಜನ ಹಿತಕ್ಕಾಗಿ ಕಾಮಗಾರಿ ನಡೆಯುವ ವೇಳೆ ಕೆಲವರಿಗೆ ಅನಾನುಕೂಲ ಆಗುವುದು ಸಹಜ. ಇಂಥ ಸಂದರ್ಭದಲ್ಲಿ ಸರ್ಕಾರ ಕೊಡುವ ಪರಿಹಾರ ಮೊತ್ತವನ್ನು ಬಳಸಿಕೊಂಡು ಜೀವನಕ್ಕಾಗಿ ಬದಲಿ ಮಾರ್ಗ ಕಂಡುಕೊಳ್ಳಲು ಅವಕಾಶಗಳಿವೆ ಎಂದರು.

ಇಲ್ಲಿ ಹೆದ್ದಾರಿ ನಿರ್ಮಾಣ ಆದ ನಂತರ ಹೆದ್ದಾರಿಯ ಅಕ್ಕ ಪಕ್ಕದ ಜಾಗಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವ ಅವಕಾಶವೂ ಇರುವುದರಿಂದ ಭೂಮಿ ಕಳೆದುಕೊಳ್ಳುವವರು ಮುಂದೆ ಉತ್ತಮ ಜೀವ ಕಂಡುಕೊಳ್ಳಬಹುದು. ಇಲ್ಲಿ ಸಿಕ್ಕಿರುವ ಪರಿಹಾರದಿಂದ ಬದಲಿ ಜಾಗ ಖರೀದಿಸಿದವರಿಗೆ ನೋಂದಣಿ ಶುಲ್ಕ ಇರುವುದಿಲ್ಲ.

ಕಾಮಗಾರಿಗಾಗಿ ಭೂಮಿ ಕಳೆದುಕೊಳ್ಳುವವರಿಗೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಈತನಕ ಒಟ್ಟು ೭.೫ ಕೋಟಿ ರೂ. ಪರಿಹಾರ ನೀಡಲಾಗಿದೆ. ಇನ್ನುಳಿದವರು ಆದಷ್ಟು ಬೇಗ ತಮ್ಮ ಜಾಗದ ದಾಖಲಾತಿಗಳನ್ನು ಕೊಟ್ಟು ಜಾಗವನ್ನು ಒಪ್ಪಿಸಬೇಕು. ಪರಿಹಾರದ ಬಗ್ಗೆ ಅಸಮಾಧಾನ ಇದ್ದರೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು. ಕಾಮಗಾರಿ ನಡೆಯುವ ವೇಳೆ ಮತ್ತು ನಂತರ ಪರಿಸರ ಉಳಿಸಲು ಹೆಚ್ಚು ಕಾಳಜಿ ತೋರಿಸಲಾಗುತ್ತಿದೆ. ಕಡೆದಿರುವ ಮರದ ಪ್ರಮಾಣಕ್ಕಿಂತ ಶೇ. ೧೦ರಷ್ಟು ಹೆಚ್ಚು ಪ್ರಮಾಣದಲ್ಲಿ ಗಿಡ ನೆಡಲಾಗುತ್ತದೆ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ ಮಾತನಾಡಿ ರಾಷ್ಟ್ರೀಯ ಹೆದ್ದಾರಿಗಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಸಂಬಂಧಿಸಿದಂತೆ ದಾಖಲಾತಿ ಸಮಸ್ಯೆ ಇದ್ದರೆ ತುರ್ತಾಗಿ ಸರಿ ಪಡಿಸಲಾಗುವುದು. ಈ ಮೂಲಕ ಪರಿಹಾರ ಆದಷ್ಟು ಶೀಘ್ರ ಪರಿಹಾರ ಪಡೆದುಕೊಳ್ಳಲು ಅನುಕೂಲ ಕಲ್ಪಿಸಲಾಗುವುದು.
ಕಾಮಗಾರಿ ನಡೆಯುವ ವೇಳೆ ಕಾವೇರಿ ನದಿಯಲ್ಲಿ ಇರುವ ಅಪರೂಪದ ಮಹಶೀರ್ ಮೀನಿನ ಸಂರಕ್ಷಣೆಗೆ ಸಂಬಂಧಿಸಿದ ವಿ?ಯಯದಲ್ಲಿ ಪರಿಸರ ಇಲಾಖೆ ಅಧಿಕಾರಿಗಳು ವಿಶೇ?ವಾಗಿ ಗಮನಹರಿಸುತ್ತಾರೆ. ಕೃಷಿ, ತೋಟಗಾರಿಕೆ, ಅರಣ್ಯಕ್ಕೆ ಸಂಬಂಧಿಸಿ ಸೂಕ್ತ ಪರಿಹಾರ ಕೊಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅನಧಿಕೃತ ಕಟ್ಟಡಗಳನ್ನು ಮಾಲೀಕರ ಖರ್ಚಿನಲ್ಲೇ ತೆರವು ಮಾಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದು ತಿಳಿಸಿದರು.

ಮೈಸೂರು ವಿಭಾಗದ ಹಿರಿಯ ಪರಿಸರ ಅಧಿಕಾರಿ ಬಿ.ಎನ್. ಪ್ರಕಾಶ್ ಮಾತನಾಡಿ, ಪರಿಸರ ರಕ್ಷಣೆ ವಿ?ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಬಹಳ ಎಚ್ಚರಿಕೆ ವಹಿಸಿದ್ದಾರೆ. ಅರಣ್ಯ ಇಲಾಖೆ ಮೂಲಕ ಗಿಡಗಳನ್ನು ನೆಡುವ ವ್ಯವಸ್ಥೆ ಮಾಡಲಾಗುತ್ತದೆ. ಭೂಮಿ ಕಳೆದುಕೊಂಡವರಿಗೆ ಪರ್ಯಾಯ ಭೂಮಿ ಕೊಡುವ ವ್ಯವಸ್ಥೆ ಇಲ್ಲಿ ಇಲ್ಲ. ಆದರೂ ಈ ಬಗ್ಗೆ ಪ್ರಯತ್ನ ನಡೆಸಲಾಗುತ್ತದೆ ಎಂದರು.

ಯೋಜನಾ ನಿರ್ದೇಶಕ ರಾಹುಲ್ ಎನ್., ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ, ಪರಿಸರ ಅಧಿಕಾರಿ ರಘುರಾಂ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net