

ಚನ್ನರಾಯಪಟ್ಟಣ : ಪೂರ್ವ ಮುಂಗಾರಿನಿಂದ ತಾಲೂಕಿನಲ್ಲಿ 14 ಮನೆಗಳಿಗೆ ಹಾನಿಯಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಮಳೆ ಹಾನಿ ಮತ್ತು ಕೋವಿಡ್ ಮುನ್ನೆಚ್ಚರಿಕೆ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಿಂದ ಹಾನಿಯಾದ ಮನೆಗಳ ಮಾಲೀಕರಿಗೆ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಪರಿಹಾರ ಮಾರ್ಗಗಳನ್ನು ಕೈಗೊಳ್ಳಲಾಗುತ್ತಿದೆ. ಶಾಲಾ ಕಟ್ಟಡಗಳಿಗೆ ಹಾನಿಯಾಗಿದ್ದರೆ ಅದರ ಪಟ್ಟಿ ನೀಡಬೇಕು. ಶಿಥಿಲವಾಗಿದ್ದರೆ ದುರಸ್ತಿ ಮಾಡಲಾಗುವುದು. ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಕೆರೆ ಕೋಡಿಗಳಿಗೆ ಹಾನಿಯಾಗದಂತೆ ಕ್ರಮವಹಿಸಬೇಕು. ಹಾನಿಯಾಗಿದ್ದರೆ ಕೂಡಲೇ ಇಂಜಿನಿಯರ್ ಗಮನಕ್ಕೆ ತಂದರೆ ದುರಸ್ತಿಮಾಡಲು ಅನುಕೂಲವಾಗುತ್ತದೆ ಎಂದರು.
ಪೂರ್ವ ಮುಂಗಾರು ತಾಲೂಕಿನಲ್ಲೂ ಹೆಚ್ಚಾಗಿಯೇ ಜನರನ್ನು ಕಾಡುತ್ತಿದ್ದು, ಸಾರ್ವಜನಿಕರು ಅಪಾಯಗಳಿಗೆ ಸಿಲುಕದಂತೆ ಎಚ್ಚರವಹಿಸಬೇಕು. ಡೆಂೆ ಹರಡದಂತೆ ಕ್ರಮವಹಿಸಬೇಕಾದರೆ ಸೊಳ್ಳೆ ನಿಯಂತ್ರಣಕ್ಕೆ ಚರಂಡಿ ಸ್ವಚ್ಛಗೊಳಿಸಬೇಕು. ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಖಾಸಗಿ ನಿವೇಶನಗಳನ್ನು ಪುರಸಭೆಯಿಂದ ಸ್ವಚ್ಛಗೊಳಿಸಿ, ವೆಚ್ಚವನ್ನು ನಿವೇಶನದ ಮಾಲೀಕರಿಂದ ವಸೂಲಿ ಮಾಡಬೇಕು. ಮುಂದಿನ ಬುಧವಾರ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದರು.
ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳಿಗಿಲ್ಲ. ರೂಪಾಂತರಿ ಕೋವಿಡ್ ಪರಿಣಾಮಕಾರಿಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಹಿಸಲಾಗುತ್ತಿದೆ. ನೆಗಡಿ, ಕೆಮ್ಮು ಇರುವವರು ಮಾಸ್ಕ್ ಧರಿಸಬೇಕು. ಗರ್ಭಿಣಿಯರು, ಬಾಣಂತಿಯರು, ವಯಸ್ಸಾದವರು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವರು ಸುರಕ್ಷತಾ ಕ್ರಮ ಅನುಸರಿಸಬೇಕು. ಆರೋಗ್ಯ ಇಲಾಖೆಯ ಕಾರ್ಯಕರ್ತರು ಹಾಗೂ ಸಿಬ್ಬಂದಿ ಗ್ರಾಮೀಣ ಪ್ರದೇಶಗಳಿಗೆ ತೆರಳಿ ನಾಗರಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ತಾಲೂಕು ಪಂಚಾಯಿತಿ ಸಿಬ್ಬಂದಿಯಿಂದಲೂ ಮಾಹಿತಿ ಪಡೆದು ಅಗತ್ಯ ಕ್ರಮಗಳನ್ನು ಅನುಸರಿಸಲಾಗುವುದು. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ತಪಾಸಣೆ ನಡೆಯಬೇಕು. ಆಸ್ಪತ್ರೆ ವತಿಯಿಂದಲೇ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಕೆಲಸಮಾಡಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಮಾತನಾಡಿ, ಕೋವಿಡ್ ಭೀತಿ ಹಿನ್ನೆಲೆ ತಾಲೂಕು ಆಸ್ಪತ್ರೆಯಲ್ಲಿ 5 ಹಾಸಿಗೆಗಳ ವಾರ್ಡ್ ತೆರೆದಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ. ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಳೆದ ಅವಧಿಯಲ್ಲಿ ಯಶಸ್ವಿಯಾಗಿ ಕೋವಿಡ್ ನಿರ್ವಹಣೆ ಮಾಡಲಾಗಿತ್ತು. ಈ ಬಾರಿಯೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇಂದಿನಿಂದ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ. ತಾಲೂಕು ಆಸ್ಪತ್ರೆಗೆ ಈಗಾಗಲೇ 300 ಪರೀಕ್ಷಾ ಕಿಟ್‌ಗಳನ್ನು ನೀಡಲಾಗಿದೆ. ಜ್ವರ, ಕೆಮ್ಮು ಪ್ರಕರಣ ಗಳು, ಬಾಣಂತಿ, ಗರ್ಭಿಣಿಯರು, ವೃದ್ಧರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ಉಸಿರಾಟದ ಸಮಸ್ಯೆ ಇರುವವರು ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರು ಉದಾಸೀನ ಮಾಡದೆ ಕೋವಿಡ್ ಪರೀಕ್ಷೆ ಮಾಡಿಸಿ ಕೊಳ್ಳುವುದು ಒಳ್ಳೆದುದು. ಸ್ಯಾಂಪಲ್‌ಗಳನ್ನು ಹಾಸನ ಜಿಲ್ಲಾಸ್ಪತ್ರೆ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದರು.
ತುರ್ತು ಚಿಕಿತ್ಸೆಗಾಗಿ 5 ಹಾಸಿಗೆಗಳನ್ನು ಕೋವಿಡ್ ಪೀಡಿತರಿಗೆಂದು ಮೀಸಲಿಡಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಲಭ್ಯತೆಯಿದೆ. 5 ವೆಂಟಿಲೇಟರ್‌ಗಳು ಹಾಗೂ 20 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಸುಸ್ಥಿತಿಯಲ್ಲಿಡಲಾಗಿದೆ. ಅವಶ್ಯವಿರುವಷ್ಟು ಔಷಧಗಳನ್ನೂ ದಾಸ್ತಾನು ಮಾಡಲಾಗಿದೆ. ಪಿಪಿಇ ಕಿಟ್‌ಗಳು, ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳು ಲಭ್ಯವಿದ್ದು, ಇದರ ನಿರ್ವಹಣೆಗಾಗಿಯೇ ವಿಶೇಷ ತಂಡವೊಂದನ್ನು ರಚಿಸಲಾಗಿದೆ ಎಂದರು.
ಪ್ರಭಾರ ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಮಾತನಾಡಿ, ತಾಲೂಕಿನ ನವಿಲೆ, ಎನ್.ಜಿ.ಕೊಪ್ಪಲು, ದಡಿಘಟ್ಟ ಅಷ್ಟೇನಹಳ್ಳಿ, ಪರಮ ಗ್ರಾಮಗಳ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಲೆಕ್ಕಿಗರು ಸ್ಥಳದಲ್ಲೇ ಇದ್ದು, ದಿನನಿತ್ಯದ ಆಗುಹೋಗುಗಳ ಬಗ್ಗೆ ವರದಿ ನೀಡಬೇಕು ಎಂದು ಸೂಚಿಸಿದರು.
ಮಲೇರಿಯಾ ಪತ್ತೆಗೆ ವಲಸೆ ಕಾರ್ಮಿಕರ ತಪಾಸಣೆ ಅವಶ್ಯವಾಗಿದೆ. ಮಲೇರಿಯಾ ರೋಗವನ್ನು 2027ಕ್ಕೆ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದ್ದು ಆದುದರಿಂದ ಹೊರ ಜಿಲ್ಲೆಯ ಮತ್ತು ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸಿ ಖಚಿತ ಪಡಿಸಿಕೊಳ್ಳಲಾಗುವುದು, ಇಲಾಖೆಯ ಎಲ್ಲ ವೈದ್ಯರು, ಅಧಿಕಾರಿ ಕ್ಷೇತ್ರ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುತ್ತಿರುವರು, ಇತರ ಇಲಾಖೆಯ ಕಾಮಗಾರಿ ಮತ್ತು ಇತರ ಕೆಲಸಗಳಿಗೆ ಆಗಮಿಸಿದ ಹೊರ ಜಿಲ್ಲೆಯ, ಹೊರರಾಜ್ಯದ ಕಾರ್ಮಿಕರು ಹಾಗೂ ಇತರರು ಕಂಡುಬಂದಲ್ಲಿ ಮಾಹಿತಿ ನೀಡಬೇಕು. ಮನೆಗಳಲ್ಲಿ ಲಾರ್ವಾಗಳು ಪತ್ತೆಯಾದರೆ 800 ರೂ. ದಂಡ ವಿಧಿಸುವ ನಿಯಮ ರೂಪಿಸಲಾಗಿದೆ. ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ ಎಚ್ಚರಿಸಿದರು.
ಗ್ರೇಡ್-2 ತಹಶೀಲ್ದಾರ್ ನಾಗರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ. ತೇಜಸ್ವಿನಿ, ವಿವಿಧ ಇಲಾಖೆಗಳ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳಿದ್ದರು.