ರೋಗ ಬರದಂತೆ ಎಚ್ಚರಿಕೆ ವಹಿಸಿ : ಗುರುಮಹಾಂತ ಸ್ವಾಮೀಜಿ ಸಲಹೆ

ILK PH 12-1 A
ಇಳಕಲ್ಲದಲ್ಲಿ ಫಿಸಿಯೋಥೆರೆಪಿ ಉಚಿತ ತಪಾಸಣೆ ಶಿಬಿರದಲ್ಲಿ ಗುರುಮಹಾಂತ ಶ್ರೀಗಳು ಕಾಲಿಗೆ ಫಿಸಿಯೋಥೆರೆಪಿ ಮಾಡಿಸಿಕೊಂಡರು. ಡಾ.ಎನ್.ಆರ್.ಪಾಟೀಲ, ಡಾ.ಎಂ.ರಾಜಕಿರಣ ಮಿನುಗಾ, ಸಂಗಮೇಶ ಸಜ್ಜನ, ಡಾ.ಆರತಿ ಪಾಟೀಲ ಇತರರಿದ್ದರು.
Published on

ಇಳಕಲ್ಲ : ಆರೋಗ್ಯವೇ ಭಾಗ್ಯವಾಗಿದೆ. ಎಷ್ಟೇ ಸಂಪತ್ತು ಗಳಿಸಿದ್ದರೂ ಆರೋಗ್ಯ ಹಾಳಾದರೆ ಮತ್ತೆ ಮರಳಿ ಪಡೆಯಲಾಗದು. ಆರೋಗ್ಯ ಚೆನ್ನಾಗಿದ್ದರೆ ಸಂಪತ್ತು ಗಳಿಸಲು ಸಾಧ್ಯ ಎಂದು ಇಳಕಲ್ಲ- ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.

ನಗರದ ರೋಟರಿ ಸಂಸ್ಥೆ ಮತ್ತು ಎನ್.ಆರ್. ಪಾಟೀಲ ಆಸ್ಪತ್ರೆಯ ಸಹಯೋಗದೊಂದಿಗೆ ವಿಶ್ವ ಫಿಸಿಯೋಥೆರೆಪಿ (ಭೌತಚಿಕಿತ್ಸಾ) ದಿನಾಚರಣೆ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಉಚಿತ ತಪಾಸಣೆ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ರಾಗಿ ಮತ್ತು ಇತರ ಸಿರಿಧಾನ್ಯಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಬಳಸಿ ರೋಗಗಳು ಬರದಂತೆ ನೋಡಿಕೊಳ್ಳಬೇಕು ಎಂದರು.

ಡಾ.ಎನ್.ಆರ್.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರೂ ಆರೋಗ್ಯದಿಂದ ಇರಬೇಕಾದರೆ ಮುಖ್ಯವಾಗಿ ಚಲನವಲನದಿಂದ ಇರಬೇಕು. ವೈಯಕ್ತಿಕವಾಗಿ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಜೀವನ ಶೈಲಿ ಬದಲಿಸಿಕೊಳ್ಳಬೇಕು. ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಹೊಟ್ಟೆನೋವು, ತಲೆನೋವು, ಕೀಲುನೋವು, ಎಲುವು ನೋವು ಯಾವುದೇ ರೋಗದಿಂದ ಬಳಲುವವರು ದಿನನಿತ್ಯ ವ್ಯಾಯಾಮ, ವಾಯು ವಿಹಾರ ಮಾಡಬೇಕು ಎಂದರು.

ಇಳಕಲ್ಲ ರೋಟರಿ ಸಂಸ್ಥೆ ಅಧ್ಯಕ್ಷ ಸಂಗಮೇಶ ಸಜ್ಜನ ಪ್ರಾಸ್ತಾವಿಕ ಮಾತನಾಡಿದರು. ಫಿಸಿಯೋಥೆರೆಪಿ ವೈದ್ಯೆ ಡಾ.ಎಂ.ರಾಜಕಿರಣ ಮಿನುಗಾ ಮಾತನಾಡಿ, ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ಉತ್ತಮ ಆರೋಗ್ಯ ಉಳಿಸಿಕೊಳ್ಳಬಹುದು ಎಂದರು.

ಫಿಸಿಯೋಥೆರೆಪಿ ವೈದ್ಯೆ ಡಾ.ಆರತಿ ಪಾಟೀಲ, ಖಜಾಂಚಿ ಬಾಬು ರಾಜೊಳ್ಳಿ, ಡಾ.ಶಂಕರಗೌಡ ಪಾಟೀಲ, ಡಾ.ಶಾಂತಲಾ ಪಾಟೀಲ ವೇದಿಕೆಯಲ್ಲಿದ್ದರು. ಗುರುಮಹಾಂತ ಶ್ರೀಗಳು ಹಾಗೂ ವೈದ್ಯ ಪಾಟೀಲರ ತಂದೆ-ತಾಯಿ ಅವರನ್ನು ಸನ್ಮಾನಿಸಲಾಯಿತು.

ರಾಜಶೇಖರ ನೇತೃತ್ವದ ಬೆಂಗಳೂರಿನ ಮಿಡಿಯಾ ಲ್ಯಾಬ್ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದರು. ಸಂಜೆಯವರೆಗೆ ನಡೆದ ಶಿಬಿರದಲ್ಲಿ 250ಕ್ಕಿಂತ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು. ರೋಟರಿ ಹಿರಿಯ ಸದಸ್ಯರಾದ ಚಂದ್ರಶೇಖರ ಮಾಳಿ, ಕೆ.ಎಸ್.ಕೂಡ್ಲೆಪ್ಪನವರ, ಬಸವರಾಜ ಹುಂಡೇಕಾರ, ವೀರೇಶ ಕೂಡಲಗಿಮಠ, ಮುತ್ತು ಬೆಂಗಳೂರ, ರವಿ ಚಟ್ಟೇರ, ಪರಶುರಾಮ ರಾಜೊಳ್ಳಿ, ಬಸವರಾಜ ಯಲ್ಲಟ್ಟಿ, ಚಂದ್ರು ಹರಿಹರ, ಶ್ರೀಕಾಂತ ಬಂಡಾರಿ ಇತರರಿದ್ದರು. ರೋಟರಿ ಸದಸ್ಯ ಬಸಲಿಂಗಪ್ಪ ತೋಟದ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಂದ್ರಶೇಖರ ತೋಟಿಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net