

ಬೈಲುಕುಪ್ಪೆ: ಕಾಡಾನೆ ಹಾಗೂ ವನ್ಯಜೀವಿಗಳಿಂದ ಯಾವುದೇ ರೀತಿಯ ಜೀವಹಾನಿ ಆಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು ಎಂದು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ತಾಲೂಕಿನ ಆಯರ್ ಬಿಡು, ಕಿರಂಗೂರು, ವಡ್ಡರ ಕೊಪ್ಪಲಿನಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಒಳಪಡುವ ಪಿರಿಯಾಪಟ್ಟಣ ತಾಲೂಕು ಹೆಚ್ಚು ಅರಣ್ಯ ಪ್ರದೇಶ ಹೊಂದಿದೆ. ಈ ಭಾಗ ದ ಹಲವು ಪ್ರದೇಶ ಅರಣ್ಯ ವ್ಯಾಪ್ತಿಗೆ ಒಳಪಡುವುದರಿಂದ ಕಾಡಂಚಿನ ರೈತರ ಬೆಳೆ ಹಾಳಾಗುತ್ತಿವೆ. ಹಾಗಾಗಿ ಕಾಡಾನೆಗಳನ್ನು ನಿಯಂತ್ರಿಸಲು ಸರ್ಕಾರ ಹಲವು ತಂತ್ರಜ್ಞಾನ ಬಳಸುತ್ತಿದ್ದು, ಇದನ್ನು ಉಪಯೋಗಿಸಿಕೊಂಡು ಕಾಡಾನೆಗಳ ಉಪಟಳವನ್ನು ನಿಯಂತ್ರಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಹಿಡಿಯುವ ಬದಲು, ಅಲ್ಲಲ್ಲಿ ಬಿದ್ದಿರುವ ಸೌದೆ ತೆಗೆದುಕೊಳ್ಳಲು ಆಕ್ಷೇಪ ವ್ಯಕ್ತಪಡಿಸುತ್ತಾರೆ. ರೈತರ ಮೇಲೆ ಮುಗಿ ಬೀಳುವ ಅಧಿಕಾರಿಗಳು ಅರಣ್ಯದೊಳಗೆ ಸಾವಿರಾರು ಮರಗಳು ಬೆಂಕಿಗಾತಿಯಾಗುವುದನ್ನು ತಡೆಯುತ್ತಿಲ್ಲ. ಅಲ್ಲದೆ ಕಾಡಂಚಿನ ಜಾಗಗಳಲ್ಲಿ ತಲೆತಲಾಂತರಗಳಿಂದ ವಾಸವಿರುವ ಜನರಿಗೂ ತೊಂದರೆ ಕೊಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು.
ಇದಕ್ಕೆ ಉತ್ತರಿಸಿದ ಸಚಿವರು, ಅರಣ್ಯ ಹೆಸರಿನಲ್ಲಿ ರೈತರಿಗೆ ತೊಂದರೆ ಕೊಡುವುದು ಸರಿಯಲ್ಲ. ಅರಣ್ಯ ಇಲಾಖೆಯವರ ಸಮಸ್ಯೆಗಳನ್ನು ಬಗೆಹರಿಸಲು ನಾನು ಸಿದ್ಧನಿದ್ದೇನೆ. ಇಲಾಖೆಯವರೂ ಕಾನೂನಿಗಿಂತ ಜೀವ ದೊಡ್ಡದು ಎಂಬುದನ್ನು ಮನಗಾಣಬೇಕು ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನಿತಿನ್ ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ, ಮೈಮುಲ್ ನಿರ್ದೇಶಕ ಪ್ರಕಾಶ್, ಜಿಪಂ ಮಾಜಿ ಸದಸ್ಯ ಗೋಪಾಲ್, ತಾಪಂ ಮಾಜಿ ಅಧ್ಯಕ್ಷೆ ಕೆ.ಆರ್.ನಿರೂಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ವೆಂಕಟೇಶ್, ದಿನೇಶ್, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಮಲ್ಲಿಕಾರ್ಜುನ್, ಗ್ರಾಮೀಣ ಕುಡಿಯುವ ನೀರಿನ ಮತ್ತು ಸರಬರಾಜು ಇಲಾಖೆ ಇಂಜಿನಿಯರ್ ಕೃಷ್ಣಮೂರ್ತಿ, ವಲಯ ಅರಣ್ಯಾಧಿಕಾರಿ ಪದ್ಮಿನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಮಮತಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ನಿರ್ಮಿತಿ ಕೇಂದ್ರದ ಅಧಿಕಾರಿ ರಕ್ಷಿತ್, ತೋಟಗಾರಿಕಾ ಇಲಾಖೆ ಸಹಾಯಕ ಅಧಿಕಾರಿ ಪ್ರಸಾದ್, ರೇಷ್ಮೆ ಇಲಾಖೆ ಸಹಾಯಕ ಅಧಿಕಾರಿ ಚಂದ್ರೇಗೌಡ ಸೇರಿದಂತೆ ಮತ್ತಿತರರು ಇದ್ದರು.