

ಶೃಂಗೇರಿ: ಶುದ್ಧ ನೀರು ಕುಡಿದರೆ ಮಾತ್ರ ಆರೋಗ್ಯಯುತ ಜೀವನ ನಡೆಸಲು ಸಾಧ್ಯ. ಹಾಗಾಗಿ ಗ್ರಾಪಂ ಅಧಿಕಾರಿಗಳು ಹಾಗೂ ನೀರುಗಂಟಿಗಳು ನೀರು ಕಲುಷಿತವಾಗದಂತೆ ಎಚ್ಚರ ವಹಿಸಬೇಕು. ಪ್ರತಿ ವರ್ಷ ನೀರಿನ ಟ್ಯಾಂಕ್‌ಗಳನ್ನು ವೈಜ್ಞಾನಿಕ ಪದ್ಧತಿಯಲ್ಲಿ ಸ್ವಚ್ಛಗೊಳಿಸಬೇಕು ಎಂದು ಜಿಲ್ಲಾ ಯೋಜನಾ ವ್ಯವಸ್ಥಾಪಕ ಎಂ.ಎಂ.ಮೋಹನ್ ಹೇಳಿದರು.
ತಾಪಂನಲ್ಲಿ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಗುರುವಾರ ಪಿಡಿಒ ಹಾಗೂ ನೀರುಗಂಟಿಗಳಿಗೆ ಗ್ರಾಮೀಣ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿಸಲು ಕಲುಷಿತವಾಗದಿರಲಿ ನಮ್ಮ ಜಲ, ಉಳಿಸಿ ಮನುಕುಲ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಲಮೂಲಗಳ ಶುದ್ಧೀಕರಣಕ್ಕೆ ಆದ್ಯತೆ ನೀಡಬೇಕು. ತ್ಯಾಜ್ಯ ವಸ್ತುಗಳನ್ನು ವ್ಯವಸ್ಥಿತವಾಗಿ ನಿಗದಿತ ಜಾಗದಲ್ಲಿ ವಿಲೇವಾರಿ ಮಾಡಬೇಕು. ಕೊಳಚೆ ನೀರು ಕುಡಿಯುವ ನೀರನ್ನು ಸೇರದಂತೆ ನೀರುಗಂಟಿಗಳು ವಾರಕ್ಕೆ ಒಂದರೆಡು ಬಾರಿ ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.
ಗ್ರಾಪಂ ಸದಸ್ಯರಿಗೆ, ಗ್ರಾಮ ನೀರು ಮತ್ತು ನೈರ್ಮಲ್ಯ ಸದಸ್ಯರಿಗೆ ನೀರಿನ ಪರೀಕ್ಷೆ ಕುರಿತು ತರಬೇತಿ ನೀಡುವುದು ಅತಿ ಮುಖ್ಯ. ಎಲ್ಲ ಜಲಮೂಲಗಳ ನೀರನ್ನು ವರ್ಷಕ್ಕೆ ಎರಡುಬಾರಿ ಜಿಲ್ಲಾಮಟ್ಟದ ಗ್ರಾಮೀಣ ಕುಡಿಯುವ ನೀರಿನ ಪ್ರಯೋಗಾಲಯದಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು.
ತಾಪಂ ಇಒ ಎಚ್.ಸುದೀಪ್, ಜಿಪಂ ನೀರು ನೈರ್ಮಲ್ಯ ವಿಭಾಗದ ಅಭಿಯಂತರ ಭುನೇಂದ್ರ, ಸಂಪನ್ಮೂಲವ್ಯಕ್ತಿ ಜಲಂಧರ್ ಇತರರಿದ್ದರು.