ಸಮಸ್ಯೆ ಉಂಟಾಗದಂತೆ ಕಟ್ಟೆಚ್ಚರ ವಹಿಸಿ

3 JKD-1 TIMAMPUR
ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದ ಸಮೃದ್ಧಿ ತಿಪ್ಪಣ್ಣನವರ ಕುಟುಂಬ ಸದಸ್ಯರಿಗೆ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸಾಂತ್ವನ ಹೇಳಿದರು.
Published on

ಜಮಖಂಡಿ: ಜಾನುವಾರು ಇದ್ದವರಿಗೆ ಮಾತ್ರ ಮೇವು ನೀಡಬೇಕೆಂದು ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರಿಗೆ ಸೂಚಿಸಿದರು.

ತಾಲೂಕಿನ ಪ್ರವಾಹ ಪೀಡಿತ ಆಲಗೂರ, ಕಡಕೋಳ ಗ್ರಾಮಗಳಿಗೆ ಹಾಗೂ ಚಿಕ್ಕಪಡಸಲಗಿ ಶ್ರಮಬಿಂದು ಸಾಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ತಿಳಿಸಿದರು.

ಹಣಕಾಸಿನ ತೊಂದರೆಯಿಲ್ಲ. ಸಮಸ್ಯೆಗಳು ಉಂಟಾಗದಂತೆ ತೀವ್ರ ಕಟ್ಟೆಚ್ಚರ ವಹಿಸಬೇಕು. ರೈತರ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನಿಗಾ ವಹಿಸಬೇಕೆಂದು ತಿಳಿಸಿದರು.

ಪರಿಸ್ಥಿತಿ ಅವಲೋಕನ ಮಾಡಲಾಗಿದೆ. ನಾವು ಬರುವವರೆಗೂ ಕಾಯಬೇಡಿ, ನದಿ ನೀರಿನಲ್ಲಿ ಪ್ರಾಣಹಾನಿಯಾದ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಿದ್ದೇವೆ ಎಂದು ತಿಳಿಸಿದರು.

ಪ್ರವಾಹ ನಿಭಾಯಿಸಲು ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಹಾನಿಗೀಡಾದ ಮನೆಗಳಿಗೆ ಪರಿಹಾರ, ಜಾನುವಾರುಗಳಿಗೆ ಮೇವು ನೀಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಪ್ರವಾಹ ಇಳಿದ ತಕ್ಷಣ ಬೆಳೆ ಸೇರಿ ಏನೇನು ಹಾನಿಯಾಗಿದೆ ಎಂಬುದರ ಕುರಿತು ಸಮೀಕ್ಷೆ ನಡೆಸಲಾಗುವುದು. ಪ್ರತಿ ತಾಲೂಕಿನಲ್ಲಿ ಪ್ರವಾಹ ಹಾನಿ, ಮತ್ತಿತರ ಖರ್ಚು ನಿಭಾಯಿಸಲು ಒಂದು ಕೋಟಿ ರೂ.ತೆಗೆದಿಡಲಾಗಿದೆ ಎಂದರು.

ಮಹಾರಾಷ್ಟ್ರದಿಂದ ಎಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆಯೋ ಅಷ್ಟೇ ನೀರನ್ನು ಹಿಪ್ಪರಗಿ ಹಾಗೂ ಆಲಮಟ್ಟಿ ಅಣೆಕಟ್ಟೆಯಿಂದ ಹೊರ ಹರಿಬಿಡುತ್ತಿದ್ದರಿಂದ ಸಮಸ್ಯೆ ಉಂಟಾಗಲ್ಲ ಎಂದು ತಿಳಿಸಿದರು.

ಬಿಜೆಪಿ ಪಾದಯಾತ್ರೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಜೆಪಿಯವರಿಗೆ ಮಾಡುವುದಕ್ಕೆ ಬೇರೆ ಕೆಲಸವಿಲ್ಲ. ಸುಮ್ಮನೆ ಕ್ರಿಯೇಟ್ ಮಾಡುತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ನೀಚ ಕೆಲಸಕ್ಕೆ ಕೇಂದ್ರ ಸರ್ಕಾರದವರೂ ಇಳಿದಿದ್ದಾರೆ. ಜನ ಇವರಿಗೆ ಛೀಮಾರಿ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದವರು ರಾಜ್ಯಪಾಲರನ್ನು ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದರು.

ಪಾದಯಾತ್ರೆ ಮಾಡಲು ಬಿಜೆಪಿಯ ಅರ್ಧ ಜನರಿಗೆ ಇಷ್ಟವಿಲ್ಲ. ಕುಮಾರಸ್ವಾಮಿ, ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ಅವರಿಗೂ ಇವರು ಮಾಡುತ್ತಿರುವುದು ತಪ್ಪು ಅನ್ನುವುದು ಗೊತ್ತಿದೆ. ಬಿಜೆಪಿಯಲ್ಲಿ ಯಾವುದೂ ಸರಿ ಇಲ್ಲ ಎಂದರು.
ನದಿ ಪ್ರವಾಹದಲ್ಲಿ ಮೃತಪಟ್ಟ ಆಲಗೂರದ ಸಿದ್ದಪ್ಪ ಅಡಹಳ್ಳಿ ಅವರ ಕುಟುಂಬ ಸದಸ್ಯರಿಗೆ ಹಾಗೂ ಕಡಕೋಳ ಗ್ರಾಮದ ಸಮೃದ್ಧಿ ತಿಪ್ಪಣ್ಣನವರ ಕುಟುಂಬ ಸದಸ್ಯರಿಗೆ ಸಚಿವ ಆರ್.ಬಿ. ತಿಮ್ಮಾಪೂರ, ಮಾಜಿ ಶಾಸಕ ಆನಂದ ನ್ಯಾಮಗೌಡ ಸಾಂತ್ವನ ಹೇಳಿದರು.
ಸಿಇಒ ಶಶಿಧರ ಕುರೇರ, ಎಸಿ ಶ್ವೇತಾ ಬೀಡಿಕರ, ತಹಸೀಲ್ದಾರ್ ಸದಾಶಿವ ಮಕ್ಕೋಜಿ, ವರ್ಧಮಾನ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ಅಬುಬಕರ ಕುಡಚಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net