ವಿದ್ಯುತ್ ಅವಘಡ ಆಗದಂತೆ ಎಚ್ಚರ ವಹಿಸಿ

Be careful not to cause an electrical accident
ಇಂಡಿಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವಿದ್ಯುತ್ ಸುರಕ್ಷಾ ಮಾಸಾಚರಣೆ ಅಂಗವಾಗಿ ಪ್ರಭಾತಪೇರಿ ಮೂಲಕ ವಿದ್ಯುತ್ ಅವಘಡದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಿದರು.
Published on

ಇಂಡಿ: ವಿದ್ಯುತ್ ಬಳಕೆದಾರರಿಗೆ ಸುರಕ್ಷತಾ ವಿದ್ಯುತ್ ನೀಡಿ, ವಿದ್ಯುತ್‌ದಿಂದ ಆಗುತ್ತಿರುವ ಅವಘಡಗಳನ್ನು ತಪ್ಪಿಸಬೇಕೆಂದು ಜಿಲ್ಲಾ ವಿದ್ಯುತ್ ಪರಿವೀಕ್ಷಕ ಇಂಜಿನಿಯರ್ ಎಸ್.ಎಚ್. ಪಾಟೀಲ ಹೇಳಿದರು.

ಪಟ್ಟಣದಲ್ಲಿ ವಿದ್ಯುತ್ ಸುರಕ್ಷತಾ ಮಾಸಾಚರಣೆ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ಸುರಕ್ಷತೆಯ ಬಗ್ಗೆ ಮಾಹಿತಿಗಳನ್ನೊಳಗೊಂಡ ಕರ ಪತ್ರ, ಘೋಷಣೆಗಳೊಂದಿಗೆ ಬುಧವಾರ ಪ್ರಭಾತಪೇರಿ ಮಾಡಿ ಶಂಕರಪಾರ್ವತಿ ಸಭಾಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ 5ವರ್ಷಗಳಲ್ಲಿ ವಿದ್ಯುತ್ ಅವಘಡದಿಂದ 443 ಘಟನೆಗಳು ಸಂಭವಿಸಿವೆ. ಅವುಗಳಲ್ಲಿ 94 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನುಳಿದ ಘಟನೆಗಳಲ್ಲಿ ಬೆಂಕಿ ಅನಾಹುತ, ಅಂಗಾಂಗಳನ್ನು ಕಳೆದುಕೊಂಡಿರುವ ಘಟನೆಗಳಿವೆ. ಇಂತಹ ಘಟನೆಗಳು ಆಗದಂತೆ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು. ಐಎಸ್‌ಐ ಅಂಗೀಕೃತ ಗುಣಮಟ್ಟದ ಉಪಕರಣಗಳನ್ನು ಗ್ರಾಹಕರು ಬಳಸುವಂತೆ ಸೂಚಿಸಬೇಕು. ಯಾವಾಗಲೂ 3 ಪಿನ್ ಸಾಕೇಟ್‌ಗಳನ್ನು ಬಳಸಿ, ವಿದ್ಯುತ್ ಸಂಪರ್ಕದ ತೆರೆದ ಭಾಗಗಳನ್ನು ಟೇಪನಿಂದ ಸುತ್ತಿ, ಮಕ್ಕಳು ವಿದ್ಯುತ್ ಉಪಕರಣಗಳನ್ನು ಮುಟ್ಟದಂತೆ ಎಚ್ಚರಿಕೆ ವಹಿಸಲು ಬಳಕೆದಾರರಿಗೆ ತಿಳಿಸಿ. ವಿದ್ಯುತ್ ಉಪಕರಣಗಳನ್ನು ಸ್ವತ ರಿಪೇರಿ ಮಾಡಲು ಮುಂದಾಗಬೇಡಿ, ಇಲೆಕ್ಟ್ರಿಶಿಯನ್ ಸಹಾಯದಿಂದಲೇ ರಿಪೇರಿ ಮಾಡಿಸಿ ಎಂದರು.

ಅಗ್ನಿಶಾಮಕ ಅಧಿಕಾರಿ ಚಂದ್ರಕಾಂತ ಪವಾರ ಮಾತನಾಡಿ, ವಿದ್ಯುತ್‌ನಿಂದ ಇಲ್ಲವೇ ಇನ್ನಿತರ ಯಾವದೇ ಅವಘಡದಿಂದ ಬೆಂಕಿ ಹೊತ್ತಿಕೊಂಡಿದ್ದರೆ ತಕ್ಷಣವೇ ಅಗ್ನಿಶಾಮಕ ಠಾಣೆ ಸಂಪರ್ಕಿಸಬೇಕು ಎಂದ ಅವರು, ಬೆಂಕಿ ನಂದಿಸುವ ವಿವಿಧ ಟೆಕ್ನಿಕ್‌ಗಳನ್ನು ತಿಳಿಸಿದರು.

ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ ಜಾಧವ, ಎಸ್.ಎ. ಬಿರಾದಾರ, ಅಮಸಿದ್ದ ದೊಡ್ಡಿ ಮಾತನಾಡಿದರು. ಜಿಲ್ಲಾ ವಿದ್ಯುತ್ ಇಲಾಖೆಯ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಿಗೇರಿ ಅಧ್ಯಕ್ಷತೆ ವಹಿಸಿದ್ದರು.

ಇಂಡಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಆರ್. ಮೇಡೇದಾರ ಪ್ರಾಸ್ತಾವಿಕ ಮಾತನಾಡಿದರು. ರಾಜೇಂದ್ರ ಪಾಟೀಲ ಪ್ರಾರ್ಥಿಸಿದರು. ಇಂಡಿ ವಿದ್ಯುತ್ ಗ್ರಾಮೀಣ ಶಾಖಾಧಿಕಾರಿ ಆರ್.ವಿ. ಕುಂಬಾರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net