

ಯಲ್ಲಾಪುರ: ತಾಲೂಕಿನಾದ್ಯಂತ ಹೆಚ್ಚುತ್ತಿರುವ ಡೆಂಘೆ ಪ್ರಕರಣಗಳು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರದಂತೆ ಎಚ್ಚರ ವಹಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಹೇಳಿದರು.
ತಾಲೂಕಿನ ಉಮ್ಮಚಗಿಯ ಶ್ರೀ ವಿದ್ಯಾಗಣಪತಿ ದೇವಸ್ಥಾನ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪ್ರಥಮ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಸುಭಾಷ ಹೆಗಡೆ ಮಾತನಾಡಿ, ತಾಲೂಕಿನ ರೈತರ ತೋಟಗಳಲ್ಲಿ ಅಡಕೆ ಮಿಳ್ಳೆ ಉದುರುತ್ತಿದ್ದು, ಈ ಕುರಿತಂತೆ ರೈತರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಪೊಟ್ಯಾಷ್ ಕೊರತೆ ಮತ್ತಿತರ ಕಾರಣಗಳಿಂದಾಗಿ ಇದು ಸಂಭವಿಸುತ್ತಿದೆ ಎಂದರು. ಕಂದಾಯ ಇಲಾಖೆಯಲ್ಲಿ ಬೆಳೆ ನಮೂದು ಮಾಡುವಾಗ ಅಡಕೆಯೊಂದಿಗೆ ಕಾಳುಮೆಣಸು ಮತ್ತು ಏಲಕ್ಕಿಗೂ ದಾಖಲೆಗಳಲ್ಲಿ ಸ್ಥಾನ ಕಲ್ಪಿಸಬೇಕು. ಅಲ್ಲದೆ, ತೋಟದಲ್ಲಿ ಬಸಿಗಾಲುವೆ ನಿರ್ವಣಕ್ಕೆ ಸಬ್ಸಿಡಿ ದೊರೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಮಾತನಾಡಿ, ರೈತರು ಪಹಣಿ ಪತ್ರಿಕೆಯನ್ನು ಸರ್ಕಾರದ ನಿರ್ದೇಶನದಂತೆ ಕಡ್ಡಾಯವಾಗಿ ಎಫ್ಐಡಿ ಮಾಡಿಸಬೇಕು ಎಂದರು.
ಪ್ರೌಢಶಾಲೆಗೆ ಕೊರತೆಯಿರುವ ಓರ್ವ ಜವಾನನ ಹುದ್ದೆಯನ್ನು ಭರ್ತಿಗೊಳಿಸಬೇಕು. ಸಹಿಪ್ರಾ ಶಾಲೆಯಲ್ಲಿ ಇರುವ ಶಿಕ್ಷಕರ ಕೊರತೆ ನೀಗಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾಯಂ ವೈದ್ಯರ ನೇಮಕಾತಿ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹುಣಸೇಮನೆಯಲ್ಲಿ ಅಗತ್ಯವಿರುವ ಪ್ರತ್ಯೇಕ ಪರಿವರ್ತಕ: ಶೀಗೇಮನೆಯಲ್ಲಿ ಬೀಳುವ ಸ್ಥಿತಿಯಲ್ಲಿರುವ ವಿದ್ಯುತ್ ಮಾರ್ಗದ ದುರಸ್ತಿ ಮತ್ತು ಉಮ್ಮಚಗಿಯಲ್ಲಿ ಗ್ರಿಡ್ ಇದ್ದರೂ ಆಗುತ್ತಿರುವ ನಿರಂತರ ವಿದ್ಯುತ್ ವ್ಯತ್ಯಯಕ್ಕೆ ಮುಕ್ತಿ ಕಲ್ಪಿಸಬೇಕು ಎಂದು ಸ್ಥಳೀಯರು ಹೆಸ್ಕಾಂ ಶಾಖಾಧಿಕಾರಿ ನಾಗರಾಜ ಅವರನ್ನು ವಿನಂತಿಸಿದರು.
ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ರವಿ ಅವರನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು, ಮಳೆಗಾಲದ ಪೂರ್ವದಲ್ಲಿ ಇಲಾಖೆ ವ್ಯಾಪ್ತಿಯ ರಸ್ತೆಗಳಂಚಿನ ಚರಂಡಿಯ ಹೂಳು ತೆಗೆದು, ಮಳೆ ನೀರು ಹರಿದು ಹೋಗುವಂತೆ ಮಾಡಲಾಗುತ್ತಿತ್ತು. ಆದರೆ, ಕಳೆದೆರಡು ವರ್ಷಗಳಿಂದ ಈ ಪ್ರಕ್ರಿಯೆ ಕಣ್ಮರೆಯಾಗಿದೆ ಎಂದು ಆರೋಪಿಸಿದರು.
ಗ್ರಾಮಸಭೆಯ ಉಸ್ತುವಾರಿ ಅಧಿಕಾರಿ ಅಶೊಕ ಬಂಟ, ಗ್ರಾಪಂ ಉಪಾಧ್ಯಕ್ಷೆ ಗಂಗಾ ಹೆಗಡೆ, ಸದಸ್ಯ ಖೈತಾನ ಡಿಸೋಜಾ, ಗ.ರಾ. ಭಟ್ಟ, ಪಿಡಿಒ ನಸ್ರೀನಾ ಯಕ್ಕುಂಡಿ, ಕಾರ್ಯದರ್ಶಿ ಮೋಹನ, ಇತರರಿದ್ದರು.