ಮತದಾನ ಬಹಿಷ್ಕರಿಸದಂತೆ ಎಚ್ಚರವಹಿಸಿ

DSC_0798=-888
Published on

ಚಿತ್ರದುರ್ಗ

ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದು, ಮೂಲಸೌಲಭ್ಯ ಕೊರತೆಯ ಕಾರಣದಿಂದ ಜಿಲ್ಲೆಯ ಯಾವ ಭಾಗದಲ್ಲೂ ಜನರಿಂದ ಮತದಾನ ಬಹಿಷ್ಕಾರದಂತಹ ಅಹಿತಕರ ಘಟನೆಗೆ ಅವಕಾಶವಾಗದಂತೆ ಕಾರ್ಯ ನಿರ್ವಹಿಸಿ ಎಂದು ಜಿಪಂ ಸಿಇಒ ಎಂ.ಎಸ್.ದಿವಾಕರ್ ತಾಕೀತು ಮಾಡಿದರು.

ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸೌಲಭ್ಯ ಒದಗಿಸಲು ಮೊದಲ ಆದ್ಯತೆ ನೀಡಿ. ಸಮಸ್ಯೆ ಕಂಡೊಂಡನೆ ಬಗೆಹರಿಸಲು ಮುಂದಾಗಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಇಲ್ಲದಿದ್ದರೆ, ಅಂತಹ ಗುತ್ತಿಗೆದಾರರು, ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಯಾವುದೇ ಸಬೂಬು ಹೇಳದೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ತಾಕೀತು ಮಾಡಿದರು.

ಕಾಮಗಾರಿಯಲ್ಲಿ ಲೋಪ ಬೇಡ

ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಮನೆ ಮನೆಗೆ ನೀರು ಪೂರೈಸುವ ಜಲಜೀವನ್ ಮಿಷನ್ ಕಾಮಗಾರಿಯ ಗುಣಮಟ್ಟವನ್ನು ಆಯಾ ತಾಲೂಕಿನ ಇಒ ಹಾಗೂ ಸಂಬಂಧಿಸಿದ ಗ್ರಾಪಂ ಪಿಡಿಒಗಳು ಖುದ್ದು ಪರಿಶೀಲಿಸಬೇಕು. ಎಲ್ಲಿಯೂ ಲೋಪವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಹಾಸ್ಟೆಲ್ ಭೇಟಿ ಕಡ್ಡಾಯ

ಜಿಲ್ಲೆಯ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಪರಿಶೀಲಿಸಲು ಆರೋಗ್ಯ, ಶಿಕ್ಷಣ, ಮೀನುಗಾರಿಕೆ, ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ತಿಂಗಳಿಗೆ ಕನಿಷ್ಠ ಮೂರು ವಸತಿನಿಲಯಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಈ ವೇಳೆ ನಿರ್ವಹಣೆ, ಸ್ವಚ್ಛತೆ ಕುರಿತು ವರದಿ ಸಲ್ಲಿಸಬೇಕು ಎಂದರು.

ಆಹಾರ ಪದಾರ್ಥಗಳ ವಿತರಣೆ ಸಂಬಂಧ ಚಲನ್ ಆಧಾರದ ಮೇಲೆ ಬಿಲ್ ಮಾಡಬೇಕೆ ಹೊರತು ಯಾವ ಕಾರಣಕ್ಕೂ ಕ್ರೆಡಿಟ್ ಬಿಲ್ ಮೇಲೆ ಸಹಿ ಹಾಕಬಾರದು. ಈ ಕುರಿತು ಎಚ್ಚರವಹಿಸಬೇಕು ಎಂದು ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ವಸತಿಯುತ ಕೆಲ ಅನುದಾನಿತ ಪ್ರೌಢಶಾಲೆಗಳಿದ್ದು, ಅಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ ಎಂಬ ಕುರಿತು ವರದಿ ನೀಡಬೇಕು ಎಂದು ಡಿಡಿಪಿಐಗೆ ಸೂಚಿಸಿದ ಅವರು, ಎಲ್ಲ ಗ್ರಾಪಂಗಳಲ್ಲೂ ಪ್ರತಿ ತಿಂಗಳು ಸ್ವಚ್ಛ ಶನಿವಾರ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮಗಳ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಮುಖ್ಯ ಲೆಕ್ಕಾಧಿಕಾರಿ ಡಿ.ಆರ್.ಮಧು ಇತರರಿದ್ದರು.

*ಕೋಟ್*

ಆಯುಷ್ ಆಸ್ಪತ್ರೆ ಸ್ಥಳಾಂತರಿಸಿ

ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಆಯುಷ್ ಆಸ್ಪತ್ರೆ ಶಿಥಿಲಗೊಂಡಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಕೂಡಲೇ ಸೂಕ್ತ ಜಾಗಕ್ಕೆ ಸ್ಥಳಾಂತರಿಸಿ. ಬರುವ ರೋಗಿಗಳಿಗೆ ವೈದ್ಯಕೀಯ ಸೌಲಭ್ಯಕ್ಕೆ ತೊಂದರೆಯಾಗದಂತೆ ಕ್ರಮವಹಿಸಿ.

ಎಂ.ಎಸ್.ದಿವಾಕರ್, ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net