ತಂಬಾಕು ವ್ಯಸನಕ್ಕೆ ಒಳಗಾಗದಂತೆ ಎಚ್ಚರವಹಿಸಿ

kolara
Published on

ಕೋಲಾರ: ತಂಬಾಕು ವ್ಯಸನಕ್ಕೆ ಒಳಗಾಗಿ ಅನೇಕ ಜನರು ಕಾಯಿಲೆಗಳಿಗೆ ತುತ್ತಾಗುವ ಮುಖಾಂತರ ಪ್ರತಿ ವರ್ಷ ಭಾರತದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ, ಆದ್ದರಿಂದ ಹದಿಹರೆಯದ ವಯಸ್ಸಿನವರು ತಂಬಾಕು ವ್ಯಸನಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿರಿ ಡಾ.ಎಂ.ಜಗದೀಶ್​ ತಿಳಿಸಿದರು.

ನಗರದ ದೇವರಾಜ್​ ಅರಸ್​ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡಮಿ ಕಾಲೇಜಿನ ಸಿಲ್ವರ್​ ಜ್ಯೂಬಲಿ ಸಭಾಂಗಣದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಶನಿವಾರ ಆಯೋಜಿಸಿದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ 1,175 ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸುವ ಮುಖಾಂತರ 12,33,659 ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ. ಕೊಟ್ಪಾ ಕಾಯ್ದೆ ಉಲ್ಲಂಘನೆಗಳ ವಿರುದ್ಧ 491 ದಾಳಿಗಳನ್ನು ಆಯೋಜಿಸಿ ಸುಮಾರು 26,16,340 ರೂ. ದಂಡ ವಸೂಲಿ ಮಾಡಲಾಗಿದೆ. ಈ ದಾಳಿಗಳನ್ನು ಇನ್ನುಮುಂದೆ ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚಿಸುವ ಉದ್ದೇಶವಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ನಿಯಮಬಾಹಿರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ತಿಳಿಸಿದರು.

ದೇವರಾಜ್​ ಅರಸ್​ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡಮಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಪ್ರಭಾಕರ್​ ಮಾತನಾಡಿ, ತಂಬಾಕು ಸೇವನೆ ಮತ್ತು ಧೂಮಪಾನದಿಂದ ದೇಹದಲ್ಲಿ ಕ್ಯಾನ್ಸರ್​ ಕಾರಕ ಜೀವಕೋಶಗಳು ಉತ್ಪತ್ತಿಯಾಗುತ್ತಾ ಕ್ಯಾನ್ಸರ್​ ಕಾಯಿಲೆಗಳಿಗೆ ಒಳಗಾಗುತ್ತಾರೆ. ಶೇ.22 ರಷ್ಟು ಜನಕ್ಕೆ ಕ್ಯಾನ್ಸರ್​ ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಬರುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ ಎಂದರು.

ದೇವರಾಜ್​ ಅರಸ್​ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡಮಿ ವಿಭಾಗದ ಕುಲಸಚಿವರಾದಂತಹ ಡಾ.ಸಿ.ಮುನಿನಾರಾಯಣ, ಡಾ.ಕೃಷ್ಣಪ್ಪ, ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎನ್​.ಸುನೀಲ್​, ಡಾ.ಟಿ.ಎಸ್​. ಪ್ರದಿಪ್​, ಡಾ. ಮಹಿಮಾ, ಮನೋ ಚಿಕಿತ್ಸೆ ವಿಭಾಗದ ಡಾ.ಶರತ್​, ಡಾ.ಸಹನಾ, ಎಸ್​.ಮೂರ್ತಿ, ಜಿಲ್ಲಾ ತಂಬಾಕು ನಿಯಂತ್ರನ ಘಟಕದ ಜಿಲ್ಲಾ ಸಲಹೆಗಾರರಾದ ಪಿ. ಮಹಮದ್​, ಜಿ.ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net