

ಚಿತ್ರದುರ್ಗ: ಪ್ರತಿಯೊಬ್ಬರ ಜೀವನ, ಜೀವ ಅತ್ಯಮೂಲ್ಯವಾದುದು. ಈ ನಿಟ್ಟಿನಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಚಿತ್ರದುರ್ಗ ವಲಯ ಮುಖ್ಯ ಇಂಜಿನಿಯರ್ ಕೆ.ವಿ.ಗೋವಿಂದಪ್ಪ ಸಲಹೆ ನೀಡಿದರು.
ಬೆಸ್ಕಾಂ ಚಿತ್ರದುರ್ಗ ವಿಭಾಗದಿಂದ ತರಾಸು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ವಿದ್ಯುತ್ ಸುರಕ್ಷತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬೇಜವಾಬ್ದಾರಿಯಿಂದಾಗಿ ವಿದ್ಯುತ್ ಅವಘಡ ಸಂಭವಿಸುತ್ತ್ತಿವೆ. ಆದ್ದರಿಂದ ಕೆಲಸ ಮಾಡುವಾಗ ಮಾರ್ಗದ ಮುಕ್ತತೆ ಪಡೆದು, ಜತೆಗೆ ಕಡ್ಡಾಯವಾಗಿ ಅರ್ಥಿಂಗ್ ಮಾಡಿಕೊಳ್ಳಬೇಕು. ಹಗ್ಗ, ಏಣಿ, ಸೆಫ್ಟಿ ಬೆಲ್ಟ್, ಹೆಲ್ಮೆಟ್, ಹ್ಯಾಂಡ್ ಗ್ಲೌಸ್, ಲೈನ್ ಟೆಸ್ಟರ್, ಕಟಿಂಗ್ ಪ್ಲೇಯರ್, ಅರ್ಥಿಂಗ್ ರಾಡ್ ಸೇರಿ ರಕ್ಷಣಾ ಸಾಮಗ್ರಿಗಳನ್ನು ಬಳಸಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
2022ರ ಏಪ್ರಿಲ್ ಮಾಹೆಯಿಂದ ಈವರೆಗೆ 27 ವಿದ್ಯುತ್ ಅವಘಡಗಳು ಸಂಭವಿಸಿವೆ. ಇದು ಕಣ್ಣಿಗೆ ಕಾಣದಂತಹ ವಾಹಕವಾಗಿದ್ದು, ಕಾರ್ಯನಿರ್ವಹಿಸುವಾಗ ಸಾಕಷ್ಟು ಮುಂಜಾಗ್ರತೆ ಅಗತ್ಯವಿದೆ. ನಿಮ್ಮ ವ್ಯಾಪ್ತಿಯಲ್ಲಿನ ಸಮಸ್ಯೆ ಬಗೆಹರಿಸಲು ಯಾವ ಕಾರಣಕ್ಕೂ ಒಬ್ಬರು ಹೋಗುವಂತಿಲ್ಲ. ಕನಿಷ್ಠ ಇಬ್ಬರು ಅಥವಾ ಮೂವರಾದರು ಇರಬೇಕು. ಜತೆಗೆ ಜನರ ರಕ್ಷಣೆಯೂ
ಅಷ್ಟೇ ಮುಖ್ಯ. ಅದು ಬೆಸ್ಕಾಂ ಕರ್ತವ್ಯವೂ ಹೌದು. ರೈತರು, ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಿ ಎಂದು ಸಲಹೆ ನೀಡಿದರು. ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಜಯಣ್ಣ, ದಾವಣಗೆರೆ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಜಗದೀಶ್, ಇಂಜಿನಿಯರ್‌ಗಳಾದ ಉಮೇಶ್, ಮಮತಾ, ಶಾಜಿಯಾ, ಲೆಕ್ಕಾಧಿಕಾರಿಗಳಾದ ದೇವರಾಜಯ್ಯ, ತಿಪ್ಪೇಶ್, ಕೆಪಿಟಿಸಿಎಲ್ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಮಹಂತೇಶ್, ಸ್ಥಳೀಯ ಸಮಿತಿ ಅಧ್ಯಕ್ಷ ಆರ್.ರವಿಕುಮಾರ್, ಕಾರ್ಯದರ್ಶಿ ಚಿದಾನಂದಪ್ಪ ಇತರರಿದ್ದರು.
*ಕೋಟ್
ಸಿಬ್ಬಂದಿ ಕೊರತೆ ಕಾರಣಕ್ಕೆ ಸಮಯ ಹಾಗೂ ಕೆಲಸದ ಒತ್ತಡ ಇಲಾಖೆಯಲ್ಲಿ ಹೆಚ್ಚಾಗಿದೆ. ಆದ್ದರಿಂದ ನೌಕರರು ಬಹಳ ಜಾಗರೂಕತೆಯಿಂದಲೇ ಕಾರ್ಯನಿರ್ವಹಿಸಬೇಕು.
ವೆಂಕಟೇಶ್ ಪವರ್ ಮ್ಯಾನ್
ಹೊಸದುರ್ಗ ಉಪವಿಭಾಗ