

ಹೊಳೆನರಸೀಪುರ : ಮನೆಯಲ್ಲಿ ಪ್ರಾಣಿಗಳನ್ನು ಸಾಕಿರುವವರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ನಾಯಿಗಳಿಗೆ ರೇಬಿಸ್ ಲಸಿಕೆ ನೀಡುವ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಎಲ್ಲ ಸಾಕಿದ ಹಾಗೂ ಬೀದಿನಾಯಿಗಳಿಗೆ ಪಶುವೈದ್ಯಕೀಯ ಇಲಾಖೆ ಉಚಿತವಾಗಿ ರೇಬಿಸ್ ಲಸಿಕೆ ಹಾಕುತ್ತಿದೆ. ಎಲ್ಲರೂ ನಾಯಿಗಳಿಗೆ ಲಸಿಕೆ ಹಾಕಿಸಿ, ರೇಬಿಸ್ ರೋಗ ತಡೆಗಟ್ಟಬೇಕು ಎಂದು ತಿಳಿಸಿದರು.
ಪಶು ವೈದ್ಯಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಅಕ್ಟೋಬರ್ 28ರವರೆಗೆ ರೇಬಿಸ್ ಲಸಿಕಾ ಆಂದೋಲನ ನಡೆಯಲಿದೆ. ಎಲ್ಲರೂ ನಾಯಿಗಳಿಗೆ ತಪ್ಪದೆ ರೇಬಿಸ್ ಲಸಿಕೆ ಹಾಕಿಸಬೇಕು. ತಾಲೂಕಿನಲ್ಲಿ ಜಾನುವಾರುಗಳ ತುರ್ತು ಚಿಕಿತ್ಸೆಗೆ 1962 ಕ್ಕೆ ಕರೆ ಮಾಡಿ ಎಂದು ತಿಳಿಸಿದರು. ಡಾ. ವೆಂಕಟೇಶಮೂರ್ತಿ, ಪಶುವೈದ್ಯಕೀಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.