

ಹೊಳೆನರಸೀಪುರ: ಸಮಾಜಘಾತಕ ಚಟುವಟಿಕೆ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಅಪರ ಸಿವಿಲ್ ನ್ಯಾಯಾಧೀಶೆ ಐಶ್ವರ್ಯಾ ಎಸ್ ಗುಡದಿನ್ನಿ ಹೇಳಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ, ಕಂದಾಯ ಇಲಾಖೆ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಮಾನವ ಕಳ್ಳ ಸಾಗಣೆ ನಿಷೇಧ ಕಾಯ್ದೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ನಡೆಯುವ ಅಪರಾಧ ಪ್ರಕರಣಗಳಲ್ಲಿ ಮಾನವ ಕಳ್ಳ ಸಾಗಣೆ ಅತ್ಯಂತ ಹೇಯವಾದದ್ದು, ಕಾನೂನಿಗೆ ವಿರುದ್ಧವಾಗಿ ನಡೆಯುವ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ ನಾಗರಿಕರು ಜಾಗೃತರಾಗಬೇಕು. ಕಾನೂನಿನ ನೆರವು ಪಡೆದುಕೊಂಡು ಸಂಬಂಧ ಪಟ್ಟವರ ಗಮನಕ್ಕೆ ತಿಳಿಸುವ ಮೂಲಕ ಸಹಕರಿಸಬೇಕು ಎಂದು ಹೇಳಿದರು.
ಸಂವಿಧಾನದಲ್ಲಿ ಸಮಾನವಾಗಿ ಬದುಕುವ ಹಕ್ಕು ಎಲ್ಲರಿಗೂ ಇದೆ. ಹಾಗಾಗಿ ಅಪರಾಧಗಳು ನಡೆಯುವ ಮುನ್ನ ಎಲ್ಲರೂ ಮುಂಜಾಗ್ರತೆ ವಹಿಸಬೇಕು. ಯುವಕರು, ಮಕ್ಕಳು, ಯುವತಿಯರು, ಮಹಿಳೆಯರನ್ನು ಒಳಗೊಂಡಂತೆ ಆಸೆ, ಆಮಿಷಗಳನ್ನು ನೀಡಿ ಅಪರಾಧ ಕ್ರಿಯೆಗಳಲ್ಲಿ ಭಾಗಿಯಾಗುವಂತೆ ಒಳಪಡಿಸುತ್ತಾರೆ. ಇಂಥ ಪ್ರಕರಣಗಳು ಕಂಡು ಬಂದಾಗ ಸಾರ್ವಜನಿಕರು ಎಚ್ಚರವಹಿಸಿ ಅಪರಾಧ ಆಗುವ ಮೊದಲು ತಡೆಗಟ್ಟಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಒಬ್ಬ ವ್ಯಕ್ತಿ ಕಾಣೆಯಾದರೆ ಕುಟುಂಬ ಹಾಗೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಘಟನೆಗಳು ನಡೆಯದಂತೆ ಸಮಾಜದಲ್ಲಿ ಎಲ್ಲರೂ ಕೈಜೋಡಿಸೋಣ. ಮಾನವ ಕಳ್ಳ ಸಾಗಣೆ ಬಗ್ಗೆ ಇನ್ನೂ ಹೆಚ್ಚಿನ ಅರಿವು ಕಾರ್ಯಕ್ರಮಗಳು ಜರುಗಬೇಕು. ಮಾಹಿತಿ ಎಲ್ಲರಿಗೂ ತಲುಪಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸಿಲ್ದಾರ್ ರೇಣುಕುಮಾರ್ ವೈ.ಎಂ. ಮಾತನಾಡಿ, ಮಾನವ ಜನ್ಮ ಅತ್ಯಂತ ಶ್ರೇಷ್ಠವಾದದ್ದು, ಜೀವ ಸಂಕುಲಗಳಲ್ಲಿ ಮನುಷ್ಯನ ಜನ್ಮ ಉತ್ತಮವಾದದ್ದು. ಆದ್ದರಿಂದ ಬದುಕಿನಲ್ಲಿ ಸಾರ್ಥಕತೆಯನ್ನು ಹೊಂದಬೇಕಾದರೆ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕು. ಒಬ್ಬರಿಗೊಬ್ಬರು ನೆರವಾಗುವ ಮೂಲಕ ಸಹಜೀವನ ನಡೆಸಬೇಕು. ಸಮಾಜ ಹಾಗೂ ಕಾನೂನಿಗೆ ವಿರುದ್ಧವಾದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದರು.
ತಾಪಂ ಇಒ ಜಿ.ಮುನಿರಾಜು, ಪೋಲಿಸ್ ಉಪ ಅಧೀಕ್ಷಕಿ ಶಾಲು, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಸೋಮಲಿಂಗೇಗೌಡ. ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ವಕೀಲೆ ಬಿಂದೇಶ್ವರಿ, ಪುರಸಭೆ ಅಧಿಕಾರಿ ಶಿವಶಂಕರ್, ಪಂಕಜಾ, ಪುಷ್ಪಾ, ಶೋಭಾ ಉಪಸ್ಥಿತರಿದ್ದರು.