ನಕಲಿ ವಸ್ತು, ವ್ಯಾಪಾರಿಗಳ ಬಗ್ಗೆ ಜಾಗೃತರಾಗಿರಿ

17 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕೆಲವರು ಹಣದಾಸೆಗೆ ಜನರಿಗೆ ಮೋಸ ಮಾಡುವಲ್ಲಿ ಸುಳ್ಳು ಹೇಳಿ ಎಲ್ಲ ಕ್ಷೇತ್ರದಲ್ಲೂ ಗ್ರಾಹಕರ ಜತೆಗೆ ಚಲ್ಲಾಟವಾಡುವುದು ಸಾಮಾನ್ಯ. ರೈತರಿಂದ ದೊಡ್ಡ ದೊಡ್ಡ ಅಧಿಕಾರಿಗಳಿಗೂ ಮೋಸ ಮಾಡಲಾರಂಭಿಸಿದ್ದಾರೆ. ಹೀಗಾಗಿ ಜನರು ಜಾಗೃತರಾಗಿರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಹೇಳಿದರು.

ನಗರದ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಶ್ರೀಮತಿ ಕ.ಶಿ. ಜಿಗಳೂರ ಕಲಾ ಹಾಗೂ ಡಾ. ಸು.ಮು. ಶೇಷಗಿರಿ ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಆಹಾರ ರಕ್ಷಣೆ ಮತ್ತು ಗುಣಮಟ್ಟ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ಅಕ್ಷರ ಓದಲಾರದೆ, ತಾಯತ ಕಟ್ಟಿಸಿಕೊಂಡು, ಹೋಮ ಹವನ ಮಾಡಿ ಪರೀಕ್ಷೆ ಪಾಸಾಗಲು ಸಾಧ್ಯವಿಲ್ಲ. ಮೋಸ ಹೋಗದೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಓದಬೇಕು. ಎಲ್ಲರೂ ವ್ಯವಹಾರದ ರೂಪದಲ್ಲಿ ಅವರ ಹೊಟ್ಟೆ ಪಾಡಿಗೆ ಇಂತಹ ವ್ಯವಹಾರ ಮಾಡಿ ಜನರಿಂದ ಹಣ ಗಳಿಸುತ್ತಾರೆ. ಇದರಿಂದ ಗ್ರಾಹಕರು, ವಿದ್ಯಾರ್ಥಿಗಳು ಜಾಗರೂಕರಾಗಿರಬೇಕು ಎಂದರು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಮಾತನಾಡಿ, ಹಣ ಕೊಟ್ಟು ವಸ್ತು ಖರೀದಿಸುವವರು ಗ್ರಾಹಕರಾಗುತ್ತಾರೆ. ಯಾರು ವಸ್ತುವನ್ನು ಮಾರುತ್ತಾರೋ ಅವರು ಸೇವಾ ಪೂರೈಕೆದಾರರಾಗುತ್ತಾರೆ. ಗ್ರಾಹಕರಿಗೆ ಮೋಸ, ವಂಚನೆ ಆಗದಿರಲಿ ಎಂದು ಗ್ರಾಹಕ ರಕ್ಷಣೆಗೆ ಗ್ರಾಹಕರ ಕಾಯ್ದೆ ಜಾರಿಗೆ ತರಲಾಗಿದೆ. ಗ್ರಾಹಕರಿಗೆ ತೊಂದರೆ ಆದರೆ ನ್ಯಾಯ ಒದಗಿಸಲು ಆಯೋಗ ಕರ್ತವ್ಯ ನಿರ್ವಹಿಸುತ್ತದೆ. ವ್ಯವಹಾರ ಮಾಡಿದ ಬಿಲ್​ಗಳ ಜತೆಗೆ ನಮಗೆ ದೂರು ದಾಖಲಿಸಿದರೆ, ನ್ಯಾಯ ಒದಗಿಸಿಕೊಡುವ ಪ್ರಯತ್ನ ಮಾಡುತ್ತೇವೆ ಎಂದರು.

ಸಂಜೀವ ಘಾನಟೆ ಉಪನ್ಯಾಸ ನೀಡಿದರು. ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯ ನಿರ್ದೇಶಕ ಎಂ.ಎಂ. ನರಸಣ್ಣವರ, ಎಸ್​.ಕೆ. ಹೊಸಂಡಿ, ಅನಿತಾ ಕಡಪಟ್ಟಿ, ಅಶ್ವಿನಿ ಪಾಟೀಲ, ಶಕುಂತಲಾ ಬಿರಾದಾರ, ಇತರರು ಇದ್ದರು.

ಡಾ. ರಾಜೇಶ್ವರಿ ಶೆಟ್ಟರ ಸ್ವಾಗತಿಸಿದರು. ಚನ್ನಬಸಪ್ಪ ಕೊಡ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇತನ ಎಂ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net