

ಕನಕಗಿರಿ: ಗಣೇಶ ಹಬ್ಬ ಆಚರಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ಹಾಗೂ ವಿಸರ್ಜನೆ ನಡೆಯುವ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಕಡ್ಡಾಯ ಎಂದು ಪಿಐ ಎಂ.ಡಿ.ಫೈಜುಲ್ಲಾ ಹೇಳಿದರು.
ಇದನ್ನೂ ಓದಿ:ಹಿರೇಕೊಡಿಗೆ ಪಿಡಿಒಗಳ ವಿರುದ್ಧ ತನಿಖೆ ಚುರುಕು
ನಗರದ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ವ್ಯಾಪ್ತಿಯ ಪಿಡಿಒಗಳ ಸಭೆಯಲ್ಲಿ ಮಾತನಾಡಿದರು. ತಾಲೂಕಿನ 11 ಗ್ರಾಪಂ ವ್ಯಾಪ್ತಿಯಲ್ಲಿ ಮೆರವಣಿಗೆ ಹಾಗೂ ವಿಸರ್ಜನೆ ಸ್ಥಳಗಳಲ್ಲಿ ಸಿಸಿ ಕ್ಯಾಮರಾ, ಬ್ಯಾರಿಕೇಡ್ ಮತ್ತು ಈಜು ತಜ್ಞರನ್ನು ಸ್ಥಳದಲ್ಲಿರುವಂತೆ ನೋಡಿಕೊಳ್ಳಬೇಕು. ವಿದ್ಯುತ್ ಸಂಪರ್ಕ ಸಮಸ್ಯೆಯಾಗದಂತೆ ಜಾಗೃತಿ ವಹಿಸಬೇಕು ಎಂದು ಸೂಚಿಸಿದರು. ನವಲಿಯ ಜಡೆಸಿದ್ದೇಶ್ವರ ಮಠದ ಬಳಿ ಹಳ್ಳ, ಲಾಯದುಣಸಿ ಕೆರೆ, ಕೆ.ಕಾಟಾಪೂರ ಕೆರೆ, ರಾಂಪುರ ಕೆರೆ, ತುಂಗಭದ್ರಾ ಕಾಲುವೆ, ಇಂಗಳದಾಳ ಕೆರೆ ಹಾಗೂ ಪಟ್ಟಣದ ಪುಷ್ಕರಣಿ ಬಳಿಯ ನೀರಿನ ತೊಟ್ಟಿಯಲ್ಲಿ ಗಣಪತಿ ವಿಸರ್ಜಿಸಲು ಬೆಳಕಿನ ವ್ಯವಸ್ಥೆ, ಸಿಸಿ ಕ್ಯಾಮರಾ ಹಾಗೂ ಬ್ಯಾರಿಕೇಡ್ ಹಾಕಲು ಆಯಾ ಗ್ರಾಪಂ ಪಿಡಿಒ, ಪಪಂ ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಮುಖ್ಯಾಧಿಕಾರಿ ಲಕ್ಷ್ಮಣ್ಣ ಕಟ್ಟಿಮನಿ, ಪಿಡಿಒಗಳಾದ ಹನುಮಂತಪ್ಪ, ಬಸವರಾಜ ಸಂಕನಾಳ, ನಾಗೇಶ ಪೂಜಾರ, ಲಕ್ಷ್ಮಣ್ ಹಿರೇಖೇಡ, ವೀರಣ್ಣ ನಕ್ರಳ್ಳಿ, ಅಮರೇಶ ರಾಠೋಡ ಇತರರಿದ್ದರು.