

ರಬಕವಿ- ಬನಹಟ್ಟಿ: ರಬಕವಿ ಮಹೇಷವಾಡಗಿ ಸೇತುವೆಯಲ್ಲಿ ನೀರಿನ ಆಳ ಹೆಚ್ಚಿದ್ದು, ಕೃಷ್ಣಾ ನದಿಯಲ್ಲಿ ಮಕ್ಕಳು ಸುಡು ಬಿಸಿಲಿನಲ್ಲಿ ನಿತ್ಯ ನದಿ ನೀರಿನಲ್ಲಿ ಚಲ್ಲಾಟವಾಡುತ್ತಾ ನದಿ ಮಧ್ಯಭಾಗಕ್ಕೆ ಈಜುತ್ತಾ ಹೋಗುತ್ತಾರೆ. ಇದು ಅಪಾಯಕಾರಿಯಾಗಿದ್ದು, ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ನಿಗಾವಹಿಸುವ ಅವಶ್ಯಕತೆಯಿದೆ.
ಕಳೆದ ಒಂದೆರಡು ವರ್ಷದಲ್ಲಿ 5ಕ್ಕೂ ಹೆಚ್ಚು ಮಕ್ಕಳು ಈಜಲು ಹೋಗಿ ಸಾವನ್ನಪ್ಪಿದ ಘಟನೆ ಅವಳಿ ನಗರದ ಜನರಿಗೆ ಅರಿವಿದೆ. ಬನಹಟ್ಟಿ ಕೆರೆಯಲ್ಲಿ ಹಾಗೂ ಕೃಷ್ಣಾ ನದಿಯಲ್ಲಿ ಅನೇಕ ಮಕ್ಕಳು ರಜೆ ಸಂದರ್ಭದಲ್ಲಿ ಈಜಲು ಹೋಗಿ ಬದುಕಿನ ಪುಟಗಳು ತೆರೆಯುವ ಮುನ್ನವೇ ಪ್ರಾಣ ಕಳೆದುಕೊಂಡಿವೆ. ಅವರ ನೆನಪಿನಲ್ಲಿಯೇ ಪಾಲಕರು ಇಂದಿಗೂ ಮಮ್ಮಲ ಮರಗುತ್ತಿದ್ದಾರೆ. ನದಿಯಲ್ಲಿ ನೀರಿನ ಆಳ ಹೆಚ್ಚಿದೆ, ಅಲ್ಲಿ ಹೇಳುವವರು ಯಾರೂ ಇರುವುದಿಲ್ಲ. ಆದ್ದರಿಂದ ಜೀವಗಳಿಗೆ ಹಾನಿಯಾಗುವ ಮುನ್ನ ಪಾಲಕರು ತಮ್ಮ ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು.
ರಬಕವಿ ಮಹೇಷವಾಡಗಿ ನೂತನ ಬ್ರಿಜ್ ಕಾಮಗಾರಿ ನಡೆಯುತ್ತಿದ್ದು, ಚೂಪಾದ ಕಬ್ಬಿಣದ ಸಲಾಕಿಗಳು, ಕಲ್ಲು ಬಂಡೆಗಳು ನೀರಿನಲ್ಲಿ ಕಾಣದ ಹಾಗೆ ಇರುತ್ತವೆ. ಗೊತ್ತಾಗದೆ ಮಕ್ಕಳು ನೀರೊಳಗೆ ಜಿಗಿದರೆ ಪ್ರಾಣ ಹಾನಿಯಾಗುವ ಸಾಧ್ಯತೆ ಇರುವುದರಿಂದ ಎಚ್ಚರವಹಿಸುವುದು ಅವಶ್ಯವಾಗಿದೆ.
ಪಾಲಕರು ಎಲ್ಲವನ್ನು ಸರ್ಕಾರ, ನಗರಸಭೆ ಹಾಗೂ ಪೊಲೀಸ್ ಇಲಾಖೆ ಮೇಲೆ ಹೊಣೆ ಹೊರಿಸದೆ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳೊಂದಿಗೆ ಈಜು ಕಲಿಸಲು ಬಂದವರು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮಕ್ಕಳ ಪ್ರಾಣಹಾನಿಯಾಗುವ ಸಾಧ್ಯತೆ ಇರುತ್ತದೆ. ಜಗದೀಶ ಈಟಿ, ಪೌರಾಯುಕ್ತರು ನಗರಸಭೆ ರಬಕವಿ ಬನಹಟ್ಟಿ