

ರಟ್ಟಿಹಳ್ಳಿ: ಪ್ರತಿಯೊಬ್ಬರೂ ಮನೆ ಸುತ್ತಮುತ್ತ ನೀರು ಮತ್ತು ತ್ಯಾಜ್ಯ ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಿದಾಗ ಮಾರಕ ಡೆಂಘೆ ರೋಗ ನಿಯಂತ್ರಿಸಬಹುದು ಎಂದು ವೈದ್ಯಾಧಿಕಾರಿ ಡಾ. ಲೋಕೇಶ ಕುಮಾರ ಹೇಳಿದರು.
ಪಟ್ಟಣದ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಸ್ಥಳೀಯ ಸಾರ್ವಜನಿಕ ಆರೋಗ್ಯ ಕೇಂದ್ರ, ಎನ್‌ಎಸ್‌ಎಸ್ ಹಾಗೂ ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಡೆಂಘೆ ನಿಯಂತ್ರಣ ಮತ್ತು ರಕ್ತದಾನ ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಜೆ ವೇಳೆ ಮನೆಯಲ್ಲಿ ಸಾಂಬ್ರಾಣಿ ಮತ್ತು ಸೊಳ್ಳೆ ಪರದೆ ಬಳಸುವುದು, ಮೈತುಂಬಾ ಬಟ್ಟೆ ಧರಿಸುವುದು ಈ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಸಾಧ್ಯವಾಗುತ್ತದೆ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ನಾಗರಾಜ ಪ್ಯಾಟಿ ಮಾತನಾಡಿ, ಅಪಘಾತ ಅಥವಾ ಚಿಕಿತ್ಸೆಯ ತುರ್ತು ಪರಿಸ್ಥಿತಿಯಲ್ಲಿ ವ್ಯಕ್ತಿಗೆ ರಕ್ತದಾನ ಮಾಡುವ ಮೂಲಕ ಅವರ ಜೀವ ಉಳಿಸಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ. ರಕ್ತದಾನದಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಉಂಟಾಗಿ ಹೃದಯ ಸಂಬಂಧಿ ಕಾಯಿಲೆಗಳು ಸಹ ದೂರವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎ.ಜಿ. ರಾಘವೇಂದ್ರ ರಕ್ತದಾನದ ಮಹತ್ವ ಮತ್ತು ಸ್ವಚ್ಛತೆಯ ಅರಿವು ಕುರಿತು ಮಾತನಾಡಿದರು. ಎನ್‌ಎಸ್‌ಎಸ್ ಅಧಿಕಾರಿ ವಿಜಯಲಕ್ಷ್ಮೀ ರೂಳಿ, ಸಿ.ಎನ್. ಸೊರಟೂರ, ಡಾ.ಎಚ್.ಬಿ. ಕೆಂಚಳ್ಳಿ, ಡಾ.ಸಿ.ಎಸ್. ಕಮ್ಮಾರ, ಇತರರು ಉಪಸ್ಥಿತರಿದ್ದರು. ಬಿ.ಸಿ. ತಿಮ್ಮೇನಹಳ್ಳಿ, ಡಾ.ವೈ.ವೈ. ಮರಳಿಹಳ್ಳಿ ಹಾಗೂ ಸಿ.ಆರ್. ಹಿತ್ತಲಮನಿ ಕಾರ್ಯಕ್ರಮ ನಿರ್ವಹಿಸಿದರು.