ದೇಶದ ಆಸ್ತಿ ಆಗಿ, ಸಮಸ್ಯಾತ್ಮಕ ವ್ಯಕ್ತಿ ಆಗಬೇಡಿ

mysore
Published on

ಮೈಸೂರು: ಯುವಜನರು ದೇಶದ ಆಸ್ತಿ ಆಗಬೇಕೇ ಹೊರತು, ಸಮಸ್ಯಾತ್ಮಕ ವ್ಯಕ್ತಿ ಆಗಬಾರದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಹೇಳಿದರು.


ಶ್ರೀ ಶಿವರಾತ್ರೀಶ್ವರ ಮಹಿಳಾ ಸಮಾಜದ ವತಿಯಿಂದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ಹಾಸ್ಟೆಲ್‌ನಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಉತ್ತಮ ನಾಗರಿಕರಾಗಿ ಬಾಳಬೇಕು ಎಂದರು.


ಶಾಲಾ-ಕಾಲೇಜು ಹಂತ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಘಟ್ಟ. ಪದವಿ ಪಡೆದ ಬಳಿಕ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಆಗ ಓದು, ಕೌಶಲ ಸಹಾಯಕ್ಕೆ ಬರುತ್ತದೆ. ದೇವರು ಸೇರಿದಂತೆ ಯಾರೂ ಬೇರೆಯವರ ಹಣೆಬರಹ ಬರೆಯುವುದಿಲ್ಲ. ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕು. ಪಾಲಕರು, ಗುರು ಸಹಾಯ ನೆಪ ಮಾತ್ರ. ಗುರಿ ತಲುಪಲು ನೀವೇ ಪರಿಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಜೀವನದಲ್ಲಿ ಆನಂದ ಬಹಳ ಮುಖ್ಯ. ನೀವು ಸಂತೋಷ, ಆನಂದವನ್ನು ಇತರರಿಗೆ ಉಣಬಡಿಸಿದರೆ ನೀವು ನೆಮ್ಮದಿಯಿಂದ ಬರಬಹುದು. ನೀವು ಕೇಡು ಮಾಡಿದರೆ ಅದರ ಫಲವಾಗಿ ದುಃಖ ಅನುಭವಿಸಬೇಕಾಗುತ್ತದೆ. ಇದರಿಂದ ಏನು ದೊರೆಯಲ್ಲ. ಸಂತಸವನ್ನು ಕೊಟ್ಟ ಸಂತಸದಿಂದ ಬದುಕುವುದನ್ನು ಮನುಷ್ಯರು ಕಲಿಯಬೇಕು ಎಂದರು.


ರಾಜೇಂದ್ರ ಶ್ರೀಗಳು ಗ್ರಾಮಾಂತರ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ-ಕಾಲೇಜು, ವಾಸ್ತವ್ಯಕ್ಕೆ ಹಾಸ್ಟೆಲ್ ನಿರ್ಮಿಸಿದರು. ಅವರು ಹುಟ್ಟು ಹಾಕಿದ ಜೆಎಸ್‌ಎಸ್ ಸಂಸ್ಥೆ ಇದೀಗ ವಿಶ್ವ ಮನ್ನಣೆ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡಿದೆ. ಇದು ರಾಜ್ಯ, ದೇಶಕ್ಕೆ ಸೀಮಿತವಾಗಿಲ್ಲ. ವಿದೇಶದಲ್ಲೂ ವಿಸ್ತಾರವಾಗಿ ಹೆಸರು ಮಾಡಿದೆ. 360 ವಿದ್ಯಾಸಂಸ್ಥೆಗಳು ಜೆಎಸ್‌ಎಸ್ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ ಎಂದರು.


ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ.ಎಚ್.ಟಿ.ಶೈಲಜಾ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಡಾ.ಎಂ.ಜಿ.ಆರ್. ಅರಸ್, ಶ್ರೀ ಶಿವರಾತ್ರೀಶ್ವರ ಮಹಿಳಾ ಸಮಾಜದ ಅಧ್ಯಕ್ಷ ಡಾ.ರತ್ನಾ ಹಾಲಪ್ಪಗೌಡ, ಪದಾಧಿಕಾರಿಗಳಾದ ಪ್ರಪೂರ್ಣೆ ವಿ.ಮಾಲಿನಿ, ಜಮುನಾ ಅರಸ್, ಮಮತಾ ಸುರೇಶ್, ಅನಸೂಯಾ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net