

ಬ್ಯಾಡಗಿ: ಸರ್ಕಾರದ ಯೋಜನೆ ಹಾಗೂ ಸೌಲಭ್ಯಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಮಳೆ ಹಾನಿ ಇತರ ಯೋಜನೆಗಳ ಕುರಿತು ನಿರ್ಲಕ್ಷ್ಯ ತೋರದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.
ಇಲ್ಲಿನ ತಹಸೀಲ್ದಾರ್ ಕಾರ್ಯಾಲಯಕ್ಕೆ ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿ, ಸಾರ್ವಜನಿಕರ ಸಮಸ್ಯೆ, ಯೋಜನೆಗಳ ಮಾಹಿತಿ ಪಡೆದರು.
ಜಿಲ್ಲಾದ್ಯಂತ ಸಾಕಷ್ಟು ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಮನೆ, ಕಟ್ಟಡ, ಬೆಳೆ ಸೇರಿ ವಿವಿಧ ಹಾನಿ ಸಂಭವಿಸಿದೆ. ಈ ಕುರಿತು ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಸೇರಿ ಆಯಾ ವ್ಯಾಪ್ತಿಯ ಅಧಿಕಾರಿಗಳು ನಿರ್ಲಕ್ಷಿಸದೆ, ತಕ್ಷಣ ಕಾರ್ಯನಿರ್ವಹಿಸಬೇಕು. ಮನೆ ಕಳೆದುಕೊಂಡ ನಿರಾಶ್ರಿತರಿಗೆ ಅಗತ್ಯವಿದ್ದಲ್ಲಿ ತುರ್ತಾಗಿ ಕಾಳಜಿ ಕೇಂದ್ರ ತೆರೆಯಬೇಕು. ಪ್ರತಿದಿನ ಮಾಹಿತಿಯನ್ನು ಅಪ್ಡೇಟ್ ಮಾಡುವ ಮೂಲಕ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕು ಎಂದು ಎಚ್ಚರಿಸಿದರು.
ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಉಮೇಶ ನಾಯಕ, ತಹಸೀಲ್ದಾರ್ ಫೀರೋಜ್ಷಾ ಸೋಮನಕಟ್ಟಿ ಅವರಿಂದ ಮಾಹಿತಿ ಪಡೆದರು.
ರೇಷನ್ ಕಾರ್ಡ್ ತಿದ್ದುಪಡಿಗೆ ಸೂಚನೆ:
ತಾಲೂಕಿನ ಹೆಡಿಗ್ಗೊಂಡ ಗ್ರಾಮದ ವೃಯೋವೃದ್ಧ ಕಲ್ಲನಗೌಡ್ರ ಪಾಟೀಲ, ತನಗೆ ನರರೋಗದ ತೊಡಕಿನಿಂದ ಆಪರೇಷನ್ ಆಗಬೇಕಿದೆ. ರೇಷನ್ ಕಾರ್ಡ್ನಲ್ಲಿ ಹೆಸರು ತಿದ್ದುಪಡಿ ಸಮಸ್ಯೆಯಿಂದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಆಹಾರ ನಿರೀಕ್ಷಕ ಮಾಲತೇಶ ಮೇಗಳಮನಿ ಕರೆಸಿ, ತಕ್ಷಣ ಪಡಿತರ ಚೀಟಿ ವಿತರಿಸುವಂತೆ ಸೂಚಿಸಿದರು.
ಮಾಹಿತಿ ನೀಡಲು ಒತ್ತಾಯ:
ರೈತರಾದ ಮಲ್ಲಿಕಾರ್ಜುನ ಬಳ್ಳಾರಿ, ಗಂಗಣ್ಣ ಎಲಿ ಮಾತನಾಡಿ, ಹಿಂದಿನ ವರ್ಷದ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಸಮರ್ಪಕವಾಗಿ ವಿತರಣೆ ನಡೆದಿಲ್ಲ ಎಂದು ದೂರಿದರು. ಕೃಷಿ ಹಾಗೂ ಕಂದಾಯ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಬ್ಯಾಡಗಿಯ ಮುಖ್ಯರಸ್ತೆ ವಿಸ್ತರಣೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ರ್ಚಚಿಸಿದ ಜಿಲ್ಲಾಧಿಕಾರಿ, ನೀರಿನ ಹೊಂಡದಂತಾಗಿರುವ ಮುಖ್ಯರಸ್ತೆಯಲ್ಲಿ ವಾಹನದಲ್ಲಿ ತೆರಳಿ ವಾಸ್ತವ ಸ್ಥಿತಿ ಪರಿಶೀಲಿಸಿದರು.
ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.