

ಎನ್.ಆರ್.ಪುರ: ಸಮಾಜದ ಬದಲಾವಣೆಗೆ ಸಮುದಾಯದ ಸಂಘಟನೆಯಾಗಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕಿನ ಬಿ.ಎಚ್.ಕೈಮರದಲ್ಲಿ ಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯದಲ್ಲಿ ನಮ್ಮ ಸಮುದಾಯವೂ ಒಂದು. ನಮ್ಮ ಸಮುದಾಯದವರು ಹಿಂದೆ ರಾಜಕೀಯಕ್ಕೆ ಬರುವುದು ಅಪರೂಪವಾಗಿತ್ತು. ಜನಾರ್ಧನ ಪೂಜಾರಿ ಮೊದಲ ಬಾರಿಗೆ ಮಂಗಳೂರಿನಿಂದ ಚುನಾವಣೆಗೆ ಸ್ಪರ್ಧಿಸಿ ಚುನಾವಣೆಯಲ್ಲಿ ಗೆದ್ದರು. ಬಡವರಿಗೆ ಬ್ಯಾಂಕ್‌ಗಳ ಬಾಗಿಲುಗಳನ್ನು ತೆರೆಸಿದ ಮಹಾನ್ ವ್ಯಕ್ತಿ ಜನಾರ್ಧನ ಪೂಜಾರಿ ಎಂದರು.
ಅವರ ಪ್ರಮಾಣಿಕ ರಾಜಕಾರಣ ನಮಗೆ ಆದರ್ಶವಾಗಿದೆ. ನಮ್ಮ ಸಮುದಾಯದ ಮಕ್ಕಳು ಸ್ವಂತ ದುಡಿಮೆಯಿಂದ ಬದುಕುವಂತಾದರೆ ನಮ್ಮ ಸಮುದಾಯ ಅಭಿವೃದ್ಧಿ ಹೊಂದಿದೆ ಎಂದರ್ಥ. ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ಸಿಕ್ಕಿದೆ. ಶತಮಾನಗಳ ಹಿಂದೆ ನಾರಾಯಣ ಗುರುಗಳು ಅಸ್ಪಶ್ಯತೆ ವಿರುದ್ಧ ಸಿಡಿದೆದ್ದಿದ್ದರು. ಮಹಾತ್ಮಾಗಾಂಧಿ ಅವರ ನಾರಾಯಣಗುರು ಅವರ ಆಶ್ರಮಕ್ಕೆ ಭೇಟಿ ನೀಡಿ ನಾರಾಯಣಗುರು ಅವರು ಒಬ್ಬ ಆಧುನಿಕ ಬ್ರಹ್ಮ ಎಂದು ವರ್ಣಿಸಿದ್ದರು. ನಾವೆಲ್ಲರೂ ಸಮರ್ಪಣಾ ಮನೋಭಾವದಿಂದ, ಸ್ವಾರ್ಥ ರಹಿತವಾಗಿ ಸೇವೆ ಸಲ್ಲಿಸಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಮಾತನಾಡಿ, ನಾರಾಯಣ ಗುರುಗಳು ಕೇರಳದಲ್ಲಿ ಒಂದೇ ದೇವರು, ಒಂದೇ ಧರ್ಮ, ಒಂದೇ ಜಾತಿ ಎಂದು ಸಾರಿ ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸಿದ್ದ ದೇವಸ್ಥಾನದಲ್ಲಿ ಪೂಜೆ ಮಾಡುವ ಅವಕಾಶ ಕಲ್ಪಿಸಿಕೊಟ್ಟರು. ನಮ್ಮ ಸಮುದಾಯ ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಸದೃಢವಾಗಬೇಕಿದೆ. ಕೆಲಸ ಮಾಡಲು ಅಧಿಕಾರವೇ ಬೇಕಿಲ್ಲ. ಮಾಡುವ ಮನಸ್ಸಿದ್ದರೆ ಸಾಕು. ಸರ್ಕಾರದ ಸೌಲಭ್ಯವನ್ನು ಸಮಾಜದ ಕಟ್ಟ ಕಡೆಯವರೆಗೂ ದೊರಕಲು ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.