ಕಲೆ, ಸಂಸ್ಕೃತಿ, ಕಲೆಯ ಪೀಠಗಳಾಗಲಿ

h18-kiresur
Published on

ಹುಬ್ಬಳ್ಳಿ: ಓದು, ಅಂಕ, ರ‌್ಯಾಂಕ್‌ಗಳ ಒತ್ತಡ ಮಕ್ಕಳ ಮೇಲಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಮಕ್ಕಳಲ್ಲಿ ಆತ್ಮವಿಶ್ವಾಸ, ದೃಢಸಂಕಲ್ಪ ಬಿತ್ತುವಂತಾಗಬೇಕು. ಮಕ್ಕಳು ಅಂಕಗಳಿಸುವ ಯಂತ್ರಗಳಲ್ಲ. ಅವರಲ್ಲೂ ಕನಸುಗಳಿವೆ. ನಿಜವಾದ ಶಿಕ್ಷಣ ಜೀವನಾನುಭವ ಪಡೆಯುವುದು. ಎಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯದ ಪೋಷಣೆಯಿಲ್ಲವೋ ಅದು ಶಿಕ್ಷಣವೇ ಅಲ್ಲ. ಶಾಲೆಗಳು ಕಲೆ, ಸಂಸ್ಕೃತಿ, ಕಲೆಯ ಪೀಠಗಳಾಗಲಿ ಎಂದು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಭಿಪ್ರಾಯಪಟ್ಟರು.

ಡಿ.ಎಸ್.ಇ.ಆರ್.ಟಿ ಸಹಯೋಗದಲ್ಲಿ ಇಂಡಿಯಾ ಫಾಂಡೇಷನ್ ಫಾರ್ ಆರ್ಟ್ಸ್, ಕಲಿ-ಕಲಿಸು ಕಲಾ ಅಂತರ್ಗತ ಕಲಿಕಾ ಯೋಜನೆ ನಿಮಿತ್ತ ತಾಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲೆ ಆವರಣದ ಅರಳೀಕಟ್ಟೆ ತೆರೆದ ವಾಚನಾಲಯದಲ್ಲಿ ಮೂರು ದಿನಗಳ ಕಲಾಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಠ್ಯಪುಸ್ತಕ ಜ್ಞಾನ ಪರೀಕ್ಷೆಯ ನಂತರ ಮರೆತುಹೋಗಬಹುದು. ಆದರೆ, ಜೀವನಾನುಭವ ನೀಡುವ ಕಲಾ ಶಿಬಿರಗಳು ಮಕ್ಕಳಲ್ಲಿ ಸಂತೋಷ, ನಿರ್ಭೀತಿಯನ್ನುಂಟು ಮಾಡುವಲ್ಲಿ ಸಹಕಾರಿಯಾಗುತ್ತವೆ. ಇಂತಹ ಶಿಬಿರಗಳಿಂದ ಮಕ್ಕಳು ತಮ್ಮ ಗ್ರಾಮದ ಇತಿಹಾಸ, ಕೆರೆ, ಬಾವಿ, ಹಳ್ಳ, ಕೊಳ್ಳ, ಜನ, ದನ, ಪ್ರಾಣಿ, ಪಕ್ಷಿ, ಮರಗಳನ್ನು ಅರಿತುಕೊಳ್ಳುವ, ಮಕ್ಕಳನ್ನು ಪರಿಪೂರ್ಣ ಮಾನವನನ್ನಾಗಿ ಮಾಡಲು ಸಹಕಾರಿ ಎಂದರು.

ಶಿಕ್ಷಣ ಚಿಂತಕ ಎಂ.ಎಂ. ಚಿಕ್ಕಮಠ ಮಾತನಾಡಿ, ಜಾತಿ, ಧರ್ಮ, ಮತ, ಪಂಥ ಮೀರಿದ ಎಲ್ಲ ರೀತಿಯ ಕಲಾ ಪ್ರಕಾರಗಳು ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿವೆ. ಆ ಕಲೆಗಳಿಂದಲೇ ಗ್ರಾಮೀಣ ಜೀವನ ಆನಂದಮಯವಾಗಿದೆ ಎಂದರು.

ರಾಷ್ಟ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಎಚ್. ನಾಯಕ ಮಾತನಾಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ಎಚ್.ವಿ. ಚೌರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅರಳೀಕಟ್ಟೆ ಸಂಯೋಜಕ ಡಾ. ಲಿಂಗರಾಜ ರಾಮಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗಣ್ಯರಾದ ವೈ.ಎಸ್. ರೇವಡಿಹಾಳ, ಮುತ್ತು ಗಾಳಪ್ಪನವರ ಕಲಾಶಿಬಿರದ ಅನಿಸಿಕೆ ಹಂಚಿಕೊಂಡರು.

ಅತಿಥಿಗಳನ್ನು ಮೆರವಣಿಗೆ ಮೂಲಕ ಅರಳೀಕಟ್ಟೆಗೆ ಕರೆತರಲಾಯಿತು.

ಬಾಲಕಿಯರು ಅತಿಥಿಗಳಿಗೆ ಆರತಿ ಬೆಳಗಿದರು. ಚಿಲಿಪಿಲಿ ಗುಬ್ಬಚ್ಚಿ ಗೂಡಿನಿಂದ ಸುಮಾರು 500ಕ್ಕೂ ಹೆಚ್ಚು ಪುಸ್ತಕಗಳನ್ನು ಶಾಲಾ ಪುಸ್ತಕ ಜೋಳಿಗೆಗೆ ದಾನ ನೀಡಲಾಯಿತು. ಅತಿಥಿಗಳನ್ನು ಸನ್ಮಾನಿಸಲಾಯಿತು.

ಹಿರಿಯರಾದ ಸಂಗಪ್ಪ ಸವದತ್ತಿ, ಸಂಪನ್ಮೂಲ ವ್ಯಕ್ತಿಗಳಾದ ರವಿ ದೇವರಡ್ಡಿ, ಕಳಕಪ್ಪ ಜಲ್ಲಿಗೇರಿ, ಶಿಕ್ಷಕರಾದ ಅಶೋಕ ಈರಗಾರ, ಸುಲೋಚನಾ ಬೆಳಗಾವಿ, ಜಯಶ್ರೀ ಎಂ., ಶಂಭುಲಿಂಗಪ್ಪ ಪೂಜಾರ ಉಪಸ್ಥಿತರಿದ್ದರು.

ಸುಪ್ರೀತಾ ಈಟಿ ಸ್ವಾಗತಿಸಿದರು. ಸಿಂಚನಾ ಹೊಂಬಳ ನಿರ್ವಹಿಸಿದರು. ಮುಸ್ಕಾನ್ ಮತ್ತೇಸಾಬನವರ, ಐಶ್ವರ್ಯ ಗುಡಿಸಲಮನಿ, ಶ್ರೇಯಾ ಮರಿಗೌಡ್ರ ಅತಿಥಿಗಳನ್ನು ಪರಿಚಯಿಸಿದರು. ಕಾವೇರಿ ನಾಗನೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net