

ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಕಣದಲ್ಲಿ ವಿರೋಧಿಗಳು ಯಾರೇ ಆಗಿದ್ದರೂ, ಅವರನ್ನು ಸಮರ್ಥವಾಗಿ ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಿಪ್ಪಾಣಿ ತಾಲೂಕಿನ ಯಕ್ಸಂಬಾದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಿಡಿಸಿಸಿ ಚುನಾವಣೆ ಪೂರ್ವ ಸಿದ್ಧತೆ ಸಭೆಯ ಬಳಿಕ ಮಾತನಾಡಿ, ಬಿಡಿಸಿಸಿ ಬ್ಯಾಂಕಿನ ಚುನಾವಣೆ ಗಂಭೀರವಾಗಿ ತೆಗೆದುಕೊಂಡಿದ್ದು, ಎಲ್ಲ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ಹೆಣೆಯಲಾಗಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ಚುನಾವಣೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಶಾಸಕ ರಮೇಶ ಜಾರಕಿಹೊಳಿ, ಶಾಸಕ ಲಕ್ಷ್ಮಣ ಸವದಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ನಡೆಯಲಿದೆ. ಮತ್ತೊಂದು ಅವಧಿಗೆ ನಮ್ಮ ಬಣವು ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಪಕ್ಷಾತೀತವಾಗಿ ಎಲ್ಲ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ಅಣಿಯಾಗುತ್ತಿದ್ದೇವೆ ಎಂದು ತಿಳಿಸಿದರು.
ಬ್ಯಾಂಕ್ ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ಈಗಿಂದಲೇ ಚುನಾವಣೆಯ ಅಖಾಡ ಸಿದ್ಧಗೊಂಡಿದ್ದು, ಮೊದಲ ಹಂತದಲ್ಲಿ ಪ್ರಚಾರ ಮಾಡಿದ್ದೇವೆ. ಬಾಕಿ ಉಳಿದಿರುವ ರಾಯಬಾಗ, ನಿಪ್ಪಾಣಿ, ಬೈಲಹೊಂಗಲ ಮತ್ತು ಚನ್ನಮ್ಮನ ಕಿತ್ತೂರು ತಾಲೂಕುಗಳಲ್ಲಿ ಆಗಸ್ಟ್‌ನಲ್ಲಿ ಪ್ರಚಾರ ಕಾರ್ಯ ನಡೆಯಲಿದೆ. ಜತೆಗೆ ಹುಕ್ಕೇರಿ ಮತ್ತು ಕಾಗವಾಡ ತಾಲೂಕುಗಳಲ್ಲಿ ಚುನಾವಣೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರ, ಅರವಿಂದ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ, ವಿಕ್ರಮ ಇನಾಂದಾರ, ಶಂಕರಗೌಡ ಪಾಟೀಲ ಇತರರಿದ್ದರು.