

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಿವಿಧ ಸಂಘ-ಸಂಸ್ಥೆಗಳಿಗೆ ಹಂಚಿಕೆ ಮಾಡಿರುವ ನಾಗರಿಕ ಸೌಲಭ್ಯ ನಿವೇಶನ (ಸಿಎ) ಗುತ್ತಿಗೆ ಮೊತ್ತದ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಿದೆ. ಒಂದು ಬಾರಿಯ ಈ ಸೌಲಭ್ಯವನ್ನು ಸಂಬಂಧಿಸಿದವರು ಬಳಸಿಕೊಳ್ಳಬೇಕು ಎಂದು ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹ್ಯಾರೀಸ್ ತಿಳಿಸಿದ್ದಾರೆ.
ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಎಯಿಂದ ಈಗಾಗಲೇ ನಾಗರಿಕ ಸೌಲಭ್ಯ ಒದಗಿಸಲು ಶೈಕ್ಷಣಿಕ, ಧಾರ್ಮಿಕ, ವೈದ್ಯಕೀಯ ಇತ್ಯಾದಿ ವಿಭಾಗದಡಿ 1,600 ಸಂಘ-ಸಂಸ್ಥೆ, ಟ್ರಸ್ಟ್‌ಗಳಿಗೆ 30 ವರ್ಷ ಗುತ್ತಿಗೆ ನೀಡಲಾಗಿದೆ. ಇವುಗಳಲ್ಲಿ ಕೆಲವರು ವಾರ್ಷಿಕ ಶುಲ್ಕ ಪಾವತಿಸಿಲ್ಲ. ಇದಕ್ಕೆ ಶೇ.18 ಬಡ್ಡಿ ಮೊತ್ತ ಕಟ್ಟಿಲ್ಲ. ಹಾಗಾಗಿ ಒಂದು ಬಾರಿ ಇತ್ಯಾರ್ಥ (ಒಟಿಎಸ್) ಮಾದರಿಯಲ್ಲಿ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಇದಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಶನಿವಾರದಿಂದ (ಜು.5) ಅಧಿಕೃತವಾಗಿ ಜಾರಿಗೆ ಬರಲಿದೆ ಎಂದರು.
ಒಟಿಎಸ್ ಸೌಲಭ್ಯ ಮುಂದಿನ 4 ತಿಂಗಳು ಚಾಲ್ತಿಯಲ್ಲಿರಲಿದೆ. ಸುಮಾರು 50 ಕೋಟಿ ರೂ. ಗಿಂತಲೂ ಹೆಚ್ಚಿನ ಮೊತ್ತದ ಬಡ್ಡಿ ಮನ್ನಾ ಮಾಡುವ ನಿರೀಕ್ಷೆ ಇದೆ. ಇದರಿಂದ ಪ್ರಾಧಿಕಾರಕ್ಕೆ ಗುತ್ತಿಗೆ ಪಡೆದಿದ್ದಕ್ಕೆ ವಾರ್ಷಿಕ ಶುಲ್ಕ 100 ಕೋಟಿ ರೂ.ಗಿಂತಹ ಅಧಿಕ ಮೊತ್ತವು ವಸೂಲಾಗುವ ನಿರೀಕ್ಷೆ ಇದೆ. ಗುತ್ತಿಗೆ ನಿಯಮದಲ್ಲಿ ಉಲ್ಲಂಘನೆ ಆದಲ್ಲಿ ಪ್ರಾಧಿಕಾರದ ನಿಯಮಾವಲಿ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಸಿಎ ಹಂಚಿಕೆಯಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರ ವಹಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಆ.15ರ ವೇಳೆಗೆ ಲೂಪ್ ಸಿದ್ಧ:
ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆಯ ಕಾಮಗಾರಿ ಪೈಕಿ ಕೆ.ಆರ್.ಭಾಗದ ಲೂಪ್ ನಿರ್ಮಾಣ ಕೊನೆ ಹಂತದಲ್ಲಿದೆ. ಈಗಾಗಲೇ ಡಿಸಿಎಂ, ಆಯುಕ್ತರು ಹಾಗೂ ನಾನು 2-3 ಬಾರಿ ಸ್ಥಳಪರಿಶೀಲನೆ ನಡೆಸಿ ಕಾಮಗಾರಿ ಚುರುಕುಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮುಂಬರುವ ಆಗ.15ರ ವೇಳೆಗೆ ಲೂಪ್ ಸಂಚಾರಕ್ಕೆ ಮುಕ್ತ ಮಾಡಲಾಗುವುದು ಎಂದು ಹ್ಯಾರೀಸ್ ತಿಳಿಸಿದರು.
ಕೆಂಪೇಗೌಡ ಲೇಔಟ್ ಕಾಮಗಾರಿ ಚುರುಕು:
ನಾಡಪ್ರಭು ಕೆಂಪೇಗೌಡ ಬಡಾವಣೆಯ 9 ಬ್ಲಾಕ್‌ಗಳಲ್ಲಿ ಐದು ಬ್ಲಾಕ್‌ಗಳಲ್ಲಿ ರಸ್ತೆ ಸೇರಿ ಇನ್ನಿತರ ಮೂಲಸೌಕರ್ಯ ಕಲ್ಪಿಸಲಾಗಿದೆ. ಉಳಿದ ನಾಲ್ಕು ಬ್ಲಾಕ್‌ಗಳಲ್ಲಿ ಭೂಸ್ವಾಧೀನ ಕಾರ್ಯದಿಂದ ನಿಧಾನಗೊಂಡಿದ್ದು, ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುತ್ತದೆ. ಕಾರಂತ ಲೇಔಟ್‌ಗೆ ಸಂಬಂಧಿಸಿ ಸೈಟ್ ಹಂಚಿಕೆ ವಿಷಯ ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದ್ದು, ಕೇಸ್ ಇತ್ಯರ್ಥದ ಬಳಿಕ ಸಾರ್ವಜನಿಕರಿಗೆ ಹಂಚಿಕೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಬಿಡಿಎ ಆಯುಕ್ತ ಪಿ.ಮಣಿವಣ್ಣನ್ ತಿಳಿಸಿದರು.