

ಆರ್.ತುಳಸಿಕುಮಾರ್
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಬಿಡಿಎ ಬಡಾವಣೆಗಳಲ್ಲಿನ ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ ಇನ್ನು ಮುಂದೆ ಪಾಲಿಕೆ ಕಚೇರಿಗಳಲ್ಲಿ ಕಟ್ಟಡ ನಕ್ಷೆ ಸಿಗುವುದಿಲ್ಲ. ಹಾಗೆಯೇ ಸರ್ಕಾರದ ನಂಬಿಕೆ ನಕ್ಷೆ ಯೋಜನೆಯಡಿ ಆನ್ಲೈನ್ನಲ್ಲೇ ನಕ್ಷೆ ಪಡೆದುಕೊಳ್ಳುವ ಸೌಲಭ್ಯವೂ ಸಿಗುವುದಿಲ್ಲ. ದಿಢೀರ್ ಬೆಳವಣಿಗೆಯಲ್ಲಿ ಬಿಡಿಎ ನಕ್ಷೆ ನೀಡಿಕೆ ಸೌಲಭ್ಯವನ್ನು ತನ್ನಲ್ಲೇ ಇರಿಸಿಕೊಳ್ಳುವಂತಹ ಆದೇಶ ಹೊರಡಿಸಿದೆ. ಇದಕ್ಕೆ ಪಾಲಿಕೆ ಕೂಡ ಒಪ್ಪಿಗೆ ನೀಡಿರುವುದು ಸಾರ್ವಜನಿಕರ ಅಲೆದಾಟಕ್ಕೆ ಆಸ್ಪದ ನೀಡಿದಂತಾಗಿದೆ.
ಇತ್ತೀಚಿಗೆ ಬಿಬಿಎಂಪಿ ‘ನಂಬಿಕೆ ನಕ್ಷೆ’ ಎಂಬ ಕಾರ್ಯಕ್ರಮದ ಮೂಲಕ 50/80 ಅಡಿ ವಿಸ್ತೀರ್ಣದ ವರೆಗಿನ ಸೈಟ್‌ಗಳಿಗೆ ಆನ್‌ಲೈನ್ ಮೂಲಕ ಸುಲಭವಾಗಿ ನಕ್ಷೆ ಮಂಜೂರಾತಿ ಸೌಲಭ್ಯವನ್ನು ಜಾರಿಗೆ ತಂದಿದೆ. ಇದಕ್ಕೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಈ ಸೌಲಭ್ಯ ಜಾರಿಗೊಂಡು ಒಂದು ತಿಂಗಳು ಪೂರೈಸುತ್ತಿರುವಾಗಲೇ, ನಗರಾಭಿವೃದ್ಧಿ ಇಲಾಖೆಯು ಸೈಟ್‌ದಾರರಿಗೆ ಗೊಂದಲ ಮೂಡಿಸುವ ತೀರ್ಮಾನಕ್ಕೆ ಅನುಮತಿ ನೀಡಿದೆ. ಇದರಿಂದಾಗಿ ರಾತ್ರೋರಾತ್ರಿ ಪಾಲಿಕೆ ಬಳಿ ಇದ್ದ ಕಟ್ಟಡ ನಕ್ಷೆ ಅನುಮತಿ/ಪರವಾನಗಿ ಅಧಿಕಾರವು ಬಿಡಿಎಗೆ ವರ್ಗಾವಣೆಯಾಗಿದೆ.
ಕಡಿಮೆ ವಿಸ್ತೀರ್ಣದ ಸೈಟ್‌ದಾರರಿಗೆ ಕಷ್ಟ:
ಹಾಲಿ ಸರ್ಕಾರದ ನಿಯಮದಂತೆ ಪಾಲಿಕೆ ವ್ಯಾಪ್ತಿಯಲ್ಲಿ 20,000 ಚದರ ಮೀಟರ್‌ಗಿಂತ ಕಡಿಮೆ ವಿಸ್ತೀರ್ಣದ ಪ್ರದೇಶಕ್ಕೆ ಬಿಬಿಎಂಪಿಯೇ ನೇರವಾಗಿ ಖಾತೆ ಮಾಡಿ ಕಟ್ಟಡ ನಕ್ಷೆಯನ್ನು ಕೂಡ ವಿತರಿಸುತ್ತಿತ್ತು. ಈ ಮಿತಿಯೊಳಗೆ 30/40 ಅಡಿ, 40/60 ಅಡಿ, 50/80 ಅಡಿ ವಿಸ್ತೀರ್ಣದ ಸೈಟ್‌ಗಳು ಸೇರಿದ್ದವು. 20 ಸಾವಿರ ಚ. ಮೀ. ಮೇಲ್ಪಟ್ಟ ವಿಸ್ತೀರ್ಣಕ್ಕೆ ಮಾತ್ರ ಬಿಡಿಎ ನಕ್ಷೆ ಮಂಜೂರಾತಿ ನೀಡುತ್ತಿತ್ತು. ಇದರಿಂದ ಎರಡೂ ಸಂಸ್ಥೆಗಳು ಯಾವುದೇ ಗೊಂದಲ ಇಲ್ಲದೆ ಜನರಿಗೆ ನಕ್ಷೆ ಮಂಜೂರಾತಿ/ಪರವಾನಗಿ ನೀಡುತ್ತಿದ್ದವು. ಆದರೆ, ಡಿಜಿಟಲ್ ಖಾತೆ ನೀಡುವ ಸರ್ಕಾರದ ಹೊಸ ಸೌಲಭ್ಯದಿಂದಾಗಿ ಕೆಲ ಸಮಸ್ಯೆಗಳು ಉದ್ಭವಿಸಲಿವೆ ಎಂಬ ಕಾರಣ ನೀಡಿ ಹಳೆಯ ನಿಯಮವನ್ನು ಬದಲಾಯಿಸಲಾಗಿದೆ. ಇದರಿಂದ ಸಾರ್ವಜನಿಕರು ವೃಥಾ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂಬ ಆಕ್ಷೇಪ ಕೇಳಿಬಂದಿದೆ.
ನಾಗರಿಕರ ಅಲೆದಾಟಕ್ಕೆ ನಾಂದಿ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಡಿಎ ನಿರ್ಮಿತ ಬಡಾವಣೆಗಳಲ್ಲಿ ಸೈಟ್‌ದಾರರು ಹೊಸದಾಗಿ ಬಿಲ್ಡಿಂಗ್ ನಿರ್ಮಿಸಬೇಕಿದ್ದಲ್ಲಿ ಈಗ ನಕ್ಷೆ ಮಂಜೂರಾತಿ ಪಡೆಯಲು ಅಲೆದಾಟ ಮಾಡಬೇಕಿದೆ. ಏಕೆಂದರೆ ಹಾಲಿ ನಿಯಮವನ್ನು ಬದಲಾಯಿಸಿದ್ದಕ್ಕೆ ಜನರಿಗೆ ಯಾವುದೇ ಮಾಹಿತಿ ನೀಡದೆ ಆದೇಶ ಹೊರಡಿಸಲಾಗಿದೆ. ಇದರ ಅರಿವು ಇಲ್ಲದ ನಾಗರಿಕರು ಯಥಾಪ್ರಕಾರ ಪಾಲಿಕೆ ಕಚೇರಿಗಳಿಗೆ ತೆರಳಿ ನಕ್ಷೆ ಮಂಜುರಾತಿಗೆ ಅರ್ಜಿ ಸಲ್ಲಿಸುವ ಪರಿಪಾಠ ಮುಂದುವರಿಸುವವರಿದ್ದಾರೆ. ಅಲ್ಲಿ ಅರ್ಜಿದಾರರಿಗೆ ಸಮರ್ಪಕ ಮಾಹಿತಿ ದೊರೆಯದೆ ಬಿಡಿಎಗೆ ತೆರಳುವಂತೆ ಸೂಚನೆ ನೀಡಿದರೂ, ಪ್ರಾಧಿಕಾರದಲ್ಲಿ ಯಾವ ರೀತಿ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಅಪಾರ್ಟ್‌ಮೆಂಟ್ ಸಹಿತ ಬೃಹತ್ ಕಟ್ಟಡ ನಿರ್ಮಾಣಗಾರರಿಗೆ ಅನ್ವಯಿಸಬೇಕಿದ್ದ ನಿಯಮವನ್ನು ಕಡಿಮೆ ವಿಸ್ತೀರ್ಣದ ಸೈಟ್‌ದಾರರಿಗೂ ವಿಸ್ತರಿಸಿರುವುದು ಸಾಮಾನ್ಯ ನಾಗರಿಕರಿಗೆ ಹೊರೆಯಾಗಲಿದೆ.
ಬಿಡಿಎ ವಾದ ಏನು?:
ಭೂಪರಿವರ್ತನೆಯಾದ ಜಮೀನುಗಳಲ್ಲಿ ಬಿಡಿಎಯಿಂದ ವಿನ್ಯಾಸ ನಕ್ಷೆ ಅನುಮೋದನೆಯಾಗದೆ ಸೈಟ್‌ಗಳಿಗೆ ಖಾತೆ ತೆರೆಯಬಾರದು. ಕಟ್ಟಡ ನಕ್ಷೆ ಅನುಮೋದನೆ ನೀಡಬಾರದೆಂದು ತಿಳಿಸಲಾಗಿದೆ. ಜತೆಗೆ ಕೆಟಿಸಿಪಿ ಕಾಯ್ದೆ 1961ರ ಕಲಂ 17ರಡಿ ವಿನ್ಯಾಸ ಅನುಮೋದನೆ ನಂತರವೇ ಖಾತೆ ಮಾಡಿ ಕಟ್ಟಡ ಕಟ್ಟಲು ಅನುಮತಿ ನೀಡಬೇಕು ಎಂಬ ವಾದವನ್ನು ಪ್ರಾಧಿಕಾರವು ಮುಂದಿಟ್ಟಿದೆ.
ಹೊಸ ಆದೇಶದಿಂದ ಪಾಲಿಕೆಯಲ್ಲಿ ಯಾರಿಗೆಲ್ಲ ಸಿಗದು ಸೌಲಭ್ಯ:
* ಸಿಟಿಎಸ್ ಸಂಖ್ಯೆ ಹೊಂದಿರುವ ನಿವೇಶನ
* ಹಳೆಯ ನಗರಸಭೆ, ಪುರಸಭೆ, ಗ್ರಾಪಂನಿಂದ ವರ್ಗಾವಣೆಗೊಂಡು ಪಾಲಿಕೆಯ ಎ ರಿಜಿಸ್ಟರ್‌ನಲ್ಲಿರುವ ಸೈಟ್
* ಬಿಡಿಎ ನಿರ್ಮಿತ/ಅನುಮೋದಿತ ಲೇಔಟ್‌ಗಳ ಸೈಟ್, ಯೋಜನಾ ನಕ್ಷೆ ಮಂಜೂರಾತಿ ಪಡೆದ ಸೈಟ್
* ಪಾಲಿಕೆಯಿಂದ ಈಗಾಗಲೇ ಕಟ್ಟಡ ನಕ್ಷೆ ನೀಡಿದ್ದರೂ, ಪರಿಷ್ಕೃತ ನಕ್ಷೆ/ಕಟ್ಟಡ ನಿರ್ಮಾಣದ ಪ್ರಸ್ತಾವನೆ
* ಕೆಎಚ್‌ಬಿ, ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿಯಿಂದ ಲಾನುಭವಿಗಳಿಗೆ ಮಂಜೂರಾದ ಸ್ವತ್ತು
* ಬಿಡಿಎ, ಬಿಎಂಐಸಿಎಪಿಎ, ಸಕ್ಷಮ ಪ್ರಾಧಿಕಾರದಿಂದ ಕೆಟಿಸಿಪಿ ಕಾಯ್ದೆ 17ರಡಿಯಲ್ಲಿ ಅನುಮೋದಿತ ಏಕ ನಿವೇಶನ
ನಗರಾಭಿವೃದ್ಧಿ ಇಲಾಖೆ ಏಕಾಏಕಿ ಪಾಲಿಕೆ ಬಳಿಯಿದ್ದ ಅಧಿಕಾರವನ್ನು ಬಿಡಿಎಗೆ ನೀಡಿರುವುದು ಜನರ ಅಲೆದಾಟಕ್ಕೆ ಅವಕಾಶ ನೀಡಿದೆ. ಬಿಡಿಎನಲ್ಲಿ ಸಣ್ಣ ಕೆಲಸಕ್ಕೂ ವರ್ಷಗಟ್ಟಲೇ ಸಮಯ ಹಿಡಿಯುವುದರಿಂದ ಬಡವರ ಸೂರಿನ ಕನಸು ಈಡೇರಿಸಿಕೊಳ್ಳುವುದು ಕಷ್ಟವಾಗಿದೆ. ಜನರ ದೃಷ್ಟಿಯಿಂದ ಹಿಂದೆ ಇದ್ದ ನಿಯಮವನ್ನೇ ಸರ್ಕಾರ ಮುಂದುವರಿಸಲಿ.
- ಎಸ್.ಅಮರೇಶ್, ವ್ಯವಸ್ಥಾಪಕ ಟ್ರಸ್ಟಿ, ಮಾಹಿತಿ ಹಕ್ಕು ಅಧ್ಯಯನ ಕೇಂದ್ರ