ಬಿಡಿಎಯಿಂದ 20 ಕೋಟಿ ರೂ. ಮೌಲ್ಯದ ಆಸ್ತಿ ವಶ

bda site
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಕಾರ್ಯಾಚರಣೆ ನಡೆಸಿ 20 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮರುವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಕೆಂಗೇರಿ ಹೋಬಳಿಯ ಕೆಂಚನಪುರ ಗ್ರಾಮದಲ್ಲಿ 34 ಗುಂಟೆ ಜಾಗವನ್ನು ಮುಖ್ಯ ಆರ್ಟೀರಿಯಲ್ ರಸ್ತೆ (ಎಂಎಆರ್) ಕಾಮಗಾರಿಗೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಜತೆಗೆ ಭೀಮನಕುಪ್ಪೆ ಗ್ರಾಮದಲ್ಲಿ 30 ಗುಂಟೆ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಕೈಗಾರಿಕೆ ಶೆಡ್ ನಿರ್ಮಿಸಿದ್ದರು. ಒತ್ತುವರಿದಾರರಿಗೆ ಜಾಗ ತೆರವು ಮಾಡುವಂತೆ ಸೂಚನೆ ನೀಡಿದರೂ, ಸ್ಪಂದನೆ ವ್ಯಕ್ತವಾಗದ ಕಾರಣ ಅನಧಿಕೃತ ಭಾಗವನ್ನು ಜೆಸಿಬಿ ಯಂತ್ರಗಳನ್ನು ಬಳಸಿ ತೆರವುಗೊಳಿಸಲಾಯಿತು. ವಶಪಡಿಸಿಕೊಂಡ ಆಸ್ತಿ ಬೆಲೆ ಅಂದಾಜು 20 ಕೋಟಿ ರೂ. ಆಗಿದ್ದು, ವಶಕ್ಕೆ ಪಡೆದ ಪ್ರದೇಶಕ್ಕೆ ತಂತಿಬೇಲಿ ಹಾಕುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯನ್ನು ಬಿಡಿಎ ಕಾರ್ಯಪಡೆಯ ಆರಕ್ಷಕ ಅಧೀಕ್ಷಕರ ನೇತೃತ್ವದಲ್ಲಿ ಕೈಗೊಳ್ಳಲಾಯಿತು. ನಾಡಪ್ರಭು ಕೆಂಪೇಗೌಡ ಲೇಔಟ್​ ವಿಭಾಗದ ಕಾರ್ಯಪಾಲಕ ಅಭಿಯಂತರರು, ಎಇಇ, ಸ್ಥಳೀಯ ಪೊಲೀಸರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net