

ಬೆಂಗಳೂರು: ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಖಾಸಗೀಕರಣ ಮಾಡಲು ಸಚಿವರು, ಶಾಸಕರು ಮುಂದಾಗಿದ್ದು, ಇದನ್ನು ತಡೆಯದಿದ್ದಲ್ಲಿ ಮುಡಾ ಹಗರಣದಂತೆ ಬಿಡಿಎ ಕಾಂಪ್ಲೆಕ್ಸ್ ಹಗರಣ ರೂಪದಲ್ಲಿ ಸಿಎಂ ಸಿದ್ದರಾಮಯ್ಯ ಕೊರಳಿಗೆ ಸುತ್ತಿಕೊಳ್ಳಲಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಭವಿಷ್ಯ ನುಡಿದರು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ‘ಬಿಡಿಎ ಕಾಂಪ್ಲೆಕ್ಸ್ ಉಳಿಸಿ’ ನಾಗರಿಕ ಪ್ರತಿರೋಧ ಸಮಾವೇಶ’ದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು.
2008ರಿಂದ ಈ ಗುತ್ತಿಗೆ ವ್ಯವಹಾರ ಆರಂಭವಾಗಿದೆ. ಇಂದಿರಾನಗರದಲ್ಲಿ ಮೊದಲು ಬಿಡಿಎ ಆಸ್ತಿಯನ್ನು ಗುತ್ತಿಗೆ ನೀಡಲಾಯಿತು. ಕಿಕ್‌ಬ್ಯಾಕ್ ಪಡೆಯುವುದರಲ್ಲಿ ಹೆಚ್ಚು ಕಡಿಮೆಯಾಗಿ, ಟೆಂಡರ್ ಕರೆಯುವುದನ್ನು ರದ್ದು ಮಾಡಲಾಗಿದೆ. ಈಗ ಗುತ್ತಿಗೆ ಹೆಸರಿನಲ್ಲಿ 7 ಕಾಂಪ್ಲೆಕ್ಸ್‌ಗಳನ್ನು ಖಾಸಗಿಯವರಿಗೆ ನೀಡಲು ಹೊರಟಿದೆ ಎಂದು ದೂರಿದರು.
2020ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಗುತ್ತಿಗೆ ಕೊಡುವುದನ್ನು ತಡೆ ಹಿಡಿಯಲಾಯಿತು. ಶಾಸಕರಾದ ಹ್ಯಾರಿಸ್‌ಗೆ ಸಂಬಂಧಪಟ್ಟ ಒಂದು ಕಂಪನಿ, ಗರುಡಾಚಾರ್‌ಗೆ ಸಂಬಂಧಪಟ್ಟ ಕಂಪನಿಗೆ ಗುತ್ತಿಗೆ ಕೊಡಲು ಹೊರಟಿದೆ. ಶೇ.65 ಖಾಸಗಿಯವರಿಗೆ ಉಳಿದ ಶೇ.35 ಬಿಡಿಎಗೆ ಎಂದು ಹೇಳಲಾಗಿದೆ. ಮೊದಲ 30 ವರ್ಷ ಒಪ್ಪಂದ ಮುಗಿದ ಬಳಿಕ ಮತ್ತೆ 30 ವರ್ಷ ವಿಸ್ತರಿಸಬಹುದಾಗಿದೆ. ಅಂದರೆ ಕಡಿಮೆ ಹಣದಲ್ಲಿ ಹೆಚ್ಚಿನ ಆಸ್ತಿಯನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರು ಇನ್ನೂ ಸುಮ್ಮನಿದ್ದರೆ ಈ ಹಗರಣ ಕೂಡ ನಿಮ್ಮ ತಲೆಗೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿರೆಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್, ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್.ಆರ್.ಹಿರೇಮಠ, ಬಿಡಿಎ ಕಾಂಪ್ಲೆಕ್ಸ್ ಹೋರಾಟ ಸಮಿತಿ ಮುಖ್ಯಸ್ಥ ಆರ್. ನಾಗೇಶ್, ಸಂಚಾಲಕ ಲಿಂಗರಾಜು, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ಹಾಗೂ ಮತ್ತಿತರರು ಭಾಗವಹಿಸಿದ್ದರು.
ಸಿದ್ದರಾಮಯ್ಯ ಸರ್ಕಾರ ಉಳ್ಳವರಿಗೆ ಅನುಕೂಲ ಮಾಡಿಕೊಡಲು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಮಧ್ಯಮ ವರ್ಗದ ವ್ಯಾಪಾರಿಗಳು ಬಿಡಿಎ ಕಾಂಪ್ಲೆಕ್ಸ್‌ಗಳಲ್ಲಿ ವ್ಯಾಪಾರ ಮಾಡಿ ಕುಟುಂಬವನ್ನು ಪೋಷಣೆ ಮಾಡುತ್ತಿದ್ದಾರೆ. ಆದರೆ, ಭ್ರಷ್ಟರ ಅನುಕೂಲಕ್ಕಾಗಿ ಬಿಡಿಎ ಕಾಂಪ್ಲೆಕ್ಸ್ ಆಸ್ತಿಗಳನ್ನು ನುಂಗಲು ಹೊರಟಿದ್ದಾರೆ.
- ನ್ಯಾ. ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ