ಬಿಡಿಎಯಿಂದ 25 ಕೋಟಿ ರೂ. ಆಸ್ತಿ ಮರುವಶ

bda property
Published on

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅನಧಿಕೃತವಾಗಿ ತಲೆಯೆತ್ತಿದ್ದ ನಿರ್ಮಾಣಗಳನ್ನು ತೆರವುಗೊಳಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ತನಗೆ ಸೇರಿದ್ದ 25 ಕೋಟಿ ರೂ. ಮೊತ್ತದ ಸ್ವತ್ತನ್ನು ಮರುವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಈ ಬಡಾವಣೆ ವ್ಯಾಪ್ತಿಯ ಕೊಡಿಗೇಹಳ್ಳಿ ಗ್ರಾಮದ ಸರ್ವೆ ನಂ.108ರ ಐದು ಎಕರೆ ಪ್ರದೇಶವನ್ನು ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಜಾಗದ ಪೈಕಿ 3 ಎಕರೆ 35 ಗುಂಟೆಯಲ್ಲಿ ರೆವಿನ್ಯೂ ನಿವೇಶನಗಳನ್ನು ರಚಿಸಲಾಗುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ನೋಟೀಸ್ ಜಾರಿ ಮಾಡಿದ್ದರೂ, ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ಸ್ಥಗಿತಗೊಳಿಸಿರಲಿಲ್ಲ. ಮಂಗಳವಾರ ಬೆಳಿಗ್ಗೆ 3 ಎಕರೆ 35 ಗುಂಟೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಏಳು ಶೆಡ್ ಹಾಗೂ ಮೂರು ಕಾಂಕ್ರೀಟ್ ಕಟ್ಟಡವನ್ನು ತೆರವುಗೊಳಿಸಲಾಯಿತು.

ಈ ತೆರವು ಕಾರ್ಯಾಚರಣೆಯಿಂದಾಗಿ ಪ್ರಾಧಿಕಾರವು ಅಂದಾಜು 25 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದೆ. ಇದೇ ವೇಳೆ ಒತ್ತುವರಿದಾರರ ವಿರುದ್ಧ ಭೂಕಬಳಿಕೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ತೆರವು ಕಾರ್ಯಾಚರಣೆ ಹೊಣೆಯನ್ನು ಪ್ರಾಧಿಕಾರದ ಆರಕ್ಷಕ ಅಧೀಕ್ಷಕ ಕೆ.ನಂಜುಂಡೇಗೌಡ ವಹಿಸಿದ್ದರು. ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರ ಅಶೋಕ್ ಹಾಗೂ ತಾವರೆಕೆರೆಯ ಸ್ಥಳೀಯ ಪೊಲೀಸರು ಜತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net