

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಸೋಮವಾರ ನಗರದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ನಿರ್ಮಾಣಗಳನ್ನು ತೆರವುಗೊಳಿಸಿ ಅಂದಾಜು 40 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮರುವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ವರ್ತುಲ ರಸ್ತೆಯ ಬಳಿಯಿರುವ ಲೊಟ್ಟೆಗೊಲ್ಲಹಳ್ಳಿ ಗ್ರಾಮಕ್ಕೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ 1 ಗೋಡೌನ್, 15 ಶೆಡ್ ಮತ್ತು 2 ಕಾರು ಗ್ಯಾರೇಜ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಈ ಸ್ವತ್ತು 32 ಗುಂಟೆ ಪ್ರದೇಶವನ್ನು ಒಳಗೊಂಡಿತ್ತು. ತೆರವು ಬಳಿಕ ಸ್ವತ್ತಿಗೆ ತಂತಿಬೇಲಿ ಹಾಕುವ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ತೆರವು ಕಾರ್ಯಾಚರಣೆಯನ್ನು ಬಿಡಿಎ ಕಾರ್ಯಪಡೆಯ ಆರಕ್ಷಕ ಅಧೀಕ್ಷಕರ ನೇತೃತ್ವದಲ್ಲಿ ನಡೆಯಿತು. ಉತ್ತರ ವಿಭಾಗದ ಕಾರ್ಯಪಾಲಕ ಅಭಿಯಂತರ, ಸ್ಥಳೀಯ ಪೊಲೀಸರು ಸ್ಥಳದಲ್ಲಿದ್ದು ಮೇಲ್ವಿಚಾರಣೆ ಕೈಗೊಂಡಿದ್ದರು.