

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಗುರುವಾರ ಪೀಣ್ಯ ಇಂಡಸ್ಟ್ರಿಯಲ್ 2ನೇ ಹಂತ ಬಡಾವಣೆಯಲ್ಲಿ 12 ಕೋಟಿ ರೂ. ಮೊತ್ತದ ಆಸ್ತಿಯನ್ನು ಮರುವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಯಶವಂತಪುರ ಹೋಬಳಿ, ಪೀಣ್ಯ ಗ್ರಾಮದ ಸರ್ವೆ ನಂ. 79ರ ಕೈಗಾರಿಕಾ ನಿವೇಶನ ಸಂಖ್ಯೆ 14 ಮತ್ತು 15ರ 12,000 ಚದರ ಅಡಿಯ ಪ್ರದೇಶದಲ್ಲಿ ಅನಧಿಕೃವಾಗಿ ನಿರ್ಮಾಣವಾಗಿದ್ದ ಶೆಡ್‌ಅನ್ನು ತೆರವುಗೊಳಿಸಲಾಗಿದೆ. ಈ ಸ್ವತ್ತಿನ ಮಾರುಕಟ್ಟೆಯ ದರ ಅಂದಾಜು 12 ಕೋಟಿ ರೂ. ಬೆಲೆ ಬಾಳುವ ಪ್ರದೇಶವನ್ನು ಪ್ರಾಧಿಕಾರವು ವಶಪಡಿಸಿಕೊಂಡಿತು.
ಕಾರ್ಯಾಚರಣೆಯ ನೇತೃತ್ವವನ್ನು ಬಿಡಿಎ ಕಾರ್ಯಪಡೆಯ ಆರಕ್ಷಕ ಅಧೀಕ್ಷಕರು ವಹಿಸಿದ್ದರು. ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಸ್ಥಳೀಯ ಪೊಲೀಸರು ಹಾಜರಿದ್ದರು.