

ಆರ್.ತುಳಸಿಕುಮಾರ್
ಬೆಂಗಳೂರು: ಉದ್ದೇಶಿತ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಯೋಜಯನ್ನು ಜಾರಿಗೊಳಿಸಲು ಹಲವು ವರ್ಷಗಳಿಂದ ತಿಣುಕಾಡುತ್ತಿರುವ ಬಿಡಿಎ, ಇದೀಗ ವೆಚ್ಚ ಕಡಿಮೆ ಮಾಡಲು ರಸ್ತೆ ಅಗಲವನ್ನೇ ಅರ್ಧದಷ್ಟು ಕಡಿಮೆ ಮಾಡುವ ಹೊಸ ಪ್ರಸ್ತಾಪವನ್ನು ಸಿದ್ಧಪಡಿಸುತ್ತಿದೆ. ದಶಕದಿಂದ ಯೋಜನೆಯನ್ನು ಯಾವ ರೂಪದಲ್ಲಿ ಅನುಷ್ಠಾನಗೊಳಿಸಬೇಕು ಎಂಬ ಸ್ಪಷ್ಟತೆ ಇಲ್ಲದ ಅಧಿಕಾರಿಗಳು ಸಮಯ ವ್ಯಯ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಂತಿದೆ.
ಯೋಜನೆ ಜಾರಿ ಮಾಡಲು ಟೆಂಡರ್ ಕರೆದಾಗಲೆಲ್ಲ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಿವೆ. ಇವುಗಳಿಗೆ ಸ್ಪಷ್ಟ ಹಾಗೂ ನಿಖರ ಪರಿಹಾರ ಕೈಗೊಳ್ಳುವ ಬದಲು ಪ್ರಾಜೆಕ್ಟ್‌ಅನ್ನು ತಿರುವು ಮುರುವು ಮಾಡಿ ಹೊಸ ವಿನ್ಯಾಸವೆಂದು ಸರ್ಕಾರದ ಮುಂದಿಟ್ಟು ಒಪ್ಪಿಗೆ ಪಡೆಯುವ ಪ್ರಯತ್ನ ಈಗಲೂ ಮುಂದುವರಿದಿದೆ. ಯೋಜನೆಯನ್ನು ಹೇಗೆ, ಯಾವ ಮಾದರಿಯಲ್ಲಿ ಜಾರಿಗೊಳಿಸಬೇಕು ಎಂಬ ಸಲಹೆಯನ್ನು ನೀಡುವ ಆಡಳಿತ ಮುತ್ಸದ್ಧಿತನದ ಕೊರತೆ ಅಧಿಕಾರಿಗಳಲ್ಲಿ ಕಾಡುತ್ತಿದೆ. ಈ ಕೊರತೆಯನ್ನು ನೀಗಿಸಲು ಸರ್ಕಾರ ಕೂಡ ಪ್ರಯತ್ನಿಸದ ಕಾರಣ ಪಿಆರ್‌ಆರ್ ಯೋಜನೆ ನೆನಗುದಿಗೆ ಬಿದ್ದಿದೆ ಎಂಬ ಆರೋಪ ಕೇಳಿಬಂದಿದೆ.
ಮುಖ್ಯವಾಗಿ ಯೋಜನೆಗೆ ಸ್ವಾಧೀನ ಪಡಿಸಿಕೊಂಡಿರುವ ರೈತರ ಜಮೀನಿಗೆ ಪರಿಹಾರ ನೀಡುವ ಸೂತ್ರವೇ ಅಂತಿಮಗೊಂಡಿಲ್ಲ. ಹಿಂದಿನ 3-4 ಸರ್ಕಾರಗಳ ಅವಧಿಯಲ್ಲಿ ಹತ್ತಾರು ಬಾರಿ ಸಭೆಗಳು ನಡೆದರೂ ತೀರ್ಮಾನ ಕೈಗೊಂಡಿಲ್ಲ. ಸ್ವತ: ಮುಖ್ಯಮಂತ್ರಿಗಳ ಸಮ್ಮುಖ ನಡೆದ ಸಭೆಗಳಲ್ಲೂ ರೈತರಿಗೆ ಭರವಸೆ ನೀಡಲಾಗಿದೆಯೇ ಹೊರತು ಇಂಥದ್ದೇ ಮಾದರಿಯ ಪರಿಹಾರ ವಿತರಿಸಲಾಗುವುದು ಎಂಬ ಅಭಯ ಅನ್ನದಾತರಿಗೆ ನೀಡಿಲ್ಲ. ಇದರಿಂದ ಯೋಜನೆ ಜಾರಿಗೆ ಅಡ್ಡಿಯಾಗಿದ್ದು, ಪಿಆರ್‌ಆರ್ ಟೇಕ್ ಆ್ ಆಗಲು ಸಾಧ್ಯವಾಗಿಲ್ಲ. ಇದನ್ನು ಅರ್ಥೈಸಿಕೊಳ್ಳದ ಸರ್ಕಾರ ಮತ್ತೆ ಮತ್ತೆ ಯೋಜನೆ ನಕ್ಷೆಯನ್ನು ಬದಲಿಸುತ್ತಿರುವುದು ಏಕೆ ಎಂಬ ಪ್ರಶ್ನೆಯನ್ನು ರೈತರು ಮುಂದಿಟ್ಟಿದ್ದಾರೆ.
ಪರಿಷ್ಕರಣೆಗೆ ಮುಂದು, ಜಾರಿಗೆ ಹಿಂದೆ:
ಪಿಆರ್‌ಆರ್ ಆರಂಭಿಕ ನಿರ್ಧಾರದಂತೆ 100 ಮೀ. ಅಗಲದ ರಸ್ತೆ ನಿರ್ಮಿಸಲು ನಿರ್ಧರಿಸಲಾಯಿತು. ರಾಷ್ಟ್ರೀಯ ಹೆದ್ದಾರಿಯನ್ನೂ ಮೀರಿಸುವ ಮಾದರಿಯಲ್ಲಿ ಮುಖ್ಯ ಕ್ಯಾರೇಜ್, ಸರ್ವಿಸ್ ರೋಡ್, ಸೈಕಲ್ ಪಥ, ಬುಲೇವಾರ್ಡ್, ವಿಶಾಲ ಫುಟ್‌ಪಾತ್, ಭವಿಷ್ಯದಲ್ಲಿ ರಸ್ತೆ ಮಧ್ಯೆ ಮೆಟ್ರೋ/ಮಾನೋ ರೈಲು ಸಂಚಾರಕ್ಕೆ ಜಾಗ ಮೀಸಲಿಡುವ ಪ್ರಸ್ತಾಪ ಒಳಗೊಂಡಿತ್ತು. ಇಷ್ಟೊಂದು ಸೌಲಭ್ಯವುಳ್ಳ ರಸ್ತೆಯನ್ನು ನಿರ್ಮಿಸಿಲು ಜಾಗತಿಕ ಟೆಂಡರ್ ಆಹ್ವಾನಿಸುವ ಆಶಯವೂ ಇತ್ತು. ನಂತರದಲ್ಲಿ ಜಮೀನು ಅಭಾವ ಮುಂದಿಟ್ಟು 75 ಮೀ.ಗೆ ಕುಗ್ಗಿಸುವ ಪ್ರಯತ್ನ ನಡೆಯಿತು. ಆಗಲೂ ಬಿಡಿಎ ಸ್ಪಷ್ಟ ತೀರ್ಮಾನ ಕೈಗೊಳ್ಳದೆ ಸರ್ಕಾರದ ಅನುಮೋದನೆಗೆ ರವಾನಿಸಿತು. ಇದಕ್ಕೆ ಒಪ್ಪಿಗೆ ಸಿಗದ ಕಾರಣ 100 ಮೀ. ಮಾದರಿಯನ್ನೇ ಉಳಿಸಿಕೊಳ್ಳುವ ಇಂಗಿತ ವ್ಯಕ್ತವಾಯಿತು. ಸಂಪನ್ಮೂಲ ಕ್ರೋಡೀಕರಿಸಲು ಬಿಡಿಎಗೆ ಸಾಧ್ಯವಾಗದಿದ್ದಾಗ ಸರ್ಕಾರವೇ ಯೋಜನೆ ಹೊಣೆ ಹೊರಲಿ ಎಂಬ ಸಲಹೆ ನೀಡಲಾಯಿತು. ಇದು ಕೂಡ ಕಾರ್ಯಗತ ಆಗಲಿಲ್ಲ. ಎನ್‌ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ಭಾರತ-ಜಪಾನ್ ಪ್ರಧಾನಮಂತ್ರಿಗಳ ದ್ವೈವಾರ್ಷಿಕ ಜಂಟಿ ಸಭೆಯಲ್ಲಿ ಪಿಆರ್‌ಆರ್‌ಗೆ ಅನುದಾನ ಒದಗಿಸಲು ಜಪಾನ್ ಅಂತಾರಾಷ್ಟ್ರೀಯ ಸಹಕಾರ ಬ್ಯಾಂಕ್ (ಜೈಕಾ) ವಾಗ್ದಾನ ನೀಡಿತು. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳದ ಬಿಡಿಎ ಆಗಲೂ ಯೋಜನೆ ಜಾರಿಯನ್ನು ಕೈಚೆಲ್ಲಿತು.
ಹೂಡಿದ ಬಂಡವಾಳ ವಾಪಸ್ ಬಾರದು . . .
ಕೋವಿಡ್ ಸಾಂಕ್ರಾಮಿಕಕ್ಕೂ ಮುನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಯೋಜನೆ ಜಾರಿ ಮಾಡುವುದು ಸೂಕ್ತ ಎಂಬ ಸಲಹೆ ಮುನ್ನೆಲೆಗೆ ಬಂದಿತು. ಆಗ ಭೂಸ್ವಾಧೀನ ಹಣ ಭರಿಸಿದರೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಎನ್‌ಎಚ್‌ಎಐ ವಾಗ್ದಾನ ನೀಡಿತು. ಇದನ್ನು ಒಪ್ಪದ ಆಗಿನ ರಾಜ್ಯ ಸರ್ಕಾರ, ಭೂಸ್ವಾಧೀನ ಬಾಬ್ತಿನಲ್ಲಿ ಒಂದಿಷ್ಟು ಪಾಲು ಭರಿಸುವಂತೆ ಸೂಚಿಸಿದ್ದಕ್ಕೆ ಎನ್‌ಎಚ್‌ಎಐ ಹಿಂದೆ ಸರಿಯಿತು. ಆ ಬಳಿಕ ರಾಜ್ಯ ಸರ್ಕಾರ ಒಂದಿಷ್ಟು ನೆರವು ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಫಲ ನೀಡಲಿಲ್ಲ. ಹಾಲಿ ಸರ್ಕಾರ ಪಿಆರ್‌ಆರ್‌ಅನ್ನು ಬೆಂಗಳೂರು ಬಿಜಿನೆಸ್ ಕಾರಿಡಾರ್ (ಬಿಸಿಸಿ) ಯೋಜನೆಯಾಗಿ ಮರುನಾಮಕರಣಗೊಳಿಸಿ ಜಾಗತಿಕ ಟೆಂಡರ್‌ಗೆ ಒಪ್ಪಿಗೆ ನೀಡಿತ್ತು. ಟೋಲ್ ಮೂಲಕ ಸಂಗ್ರಹಿಸುವ ಹಣ ಹೂಡಿದ ಬಂಡವಾಳ ವಾಪಸ್ ಬಾರದು ಎಂಬ ಕಾರಣಕ್ಕೆ ಮೂರೂ ಬಾರಿಯೂ ಗುತ್ತಿಗೆ ಕಂಪನಿಗಳು ಹಿಂದೆ ಸರಿದ ಕಾರಣ ಟೆಂಡರ್ ರದ್ದಾಗಿದೆ. ಈಗ ರಸ್ತೆ ಅಗಲವನ್ನು 100 ಮೀ.ನಿಂದ 50 ಮೀ.ಗೆ ಕುಗ್ಗಿಸಿ ಹೊಸದಾಗಿ ಯೋಜನೆ ರೂಪಿಸುವ ಪ್ರಸ್ತಾಪ ಮುನ್ನೆಲೆಗೆ ಬಂದಿದೆ.
ರೈತರಿಂದ ಮತ್ತೆ ವಿರೋಧ?:
ಪಿಆರ್‌ಆರ್‌ಗೆ ಜಮೀನು ಬಿಟ್ಟುಕೊಟ್ಟಿರುವ ರೈತರು ಬಿಡಿಎ ಹಾಗೂ ಸರ್ಕಾರದ ನಿಧಾನಗತಿ ತಿರ್ಮಾನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಪದೇ ಪದೆ ಯೋಜನಾ ನಕ್ಷೆ ಬದಲಿಸುವಲ್ಲೇ ಕಾಲವ್ಯಯ ಮಾಡುತ್ತಿರುವ ಬಿಡಿಎ ನಡೆ ವಿರೋಧಿಸಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರ ಮಧ್ಯಸ್ಥಿಕೆ ನಡೆಸಿ ಪರಿಹಾರ ಒದಗಿಸುವ ಭರವಸೆ ನೀಡುತ್ತಿತ್ತು. ಈಗ ಮತ್ತೊಂದು ಮಾದರಿಯಲ್ಲಿ ಯೋಜನೆ ಬದಲಿಸಿದ್ದಲ್ಲಿ ನಮಗೆ ಸಿಗಬೇಕಾದ ಪರಿಹಾರ ಮರೀಚಿಕೆ ಆಗುವುದೆಂಬ ಆತಂಕ ರೈತರದ್ದಾಗಿದೆ.
ಪಿಆರ್‌ಆರ್ ಯೋಜನೆ ಏನು-ಎತ್ತ?:
ಜಮೀನು ಸ್ವಾಧೀನ: 2,350 ಎಕರೆ
ರಸ್ತೆ ಉದ್ದ: 73.5 ಕಿ.ಮೀ.
ರಸ್ತೆ ಅಗಲ: 100 ಮೀ.
ವೆಚ್ಚ: 27,000 ಕೋಟಿ ರೂ.
ಕಾಮಗಾರಿ ಅವಧಿ: ಅಂದಾಜು 4 ವರ್ಷ
ಮಾರ್ಗ: ತುಮಕೂರು ರಸ್ತೆ-ಬಳ್ಳಾರಿ ರಸ್ತೆ-ಹಳೇ ಮದರಾಸು ರಸ್ತೆ-ಹೊಸೂರು ರಸ್ತೆ.