ಬಿಡಿಎಯಿಂದ ನಾಗರಿಕರ ಕುಂದುಕೊರತೆ ಆಲಿಸಲು ಹೊಸ ವ್ಯವಸ್ಥೆ

bda office
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಗರಿಕರ ಕುಂದುಕೊರತೆ ಆಲಿಸಿ ಪರಿಹಾರ ಒದಗಿಸಲು ನೂತನ ಸಹಾಯ ಕೇಂದ್ರವನ್ನು ಆರಂಭಿಸಿದೆ.

ಸಾರ್ವಜನಿಕರಿಂದ ಸ್ವೀಕರಿಸಲಾಗುವ ಯಾವುದೇ ಕೋರಿಕೆ, ಮನವಿ, ದೂರುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜನಸ್ನೇಹಿ ತಂತ್ರಾಂಶವನ್ನು ಅಳವಡಿಸಲಾಗಿದೆ. ಈ ಸಾರ್ವಜನಿಕರ ಕುಂದುಕೊರತೆ ನಿವಾರಣಾ ವ್ಯವಸ್ಥೆ (ಐಪಿಜಿಆರ್‌ಎಸ್ ವೆಬ್ ಆ್ಯಪ್) ಅಥವಾ ನಾಗರಿಕ ಸಹಾಯ ಕೇಂದ್ರಕ್ಕೆ (ದೂರವಾಣಿ ಸಂಖ್ಯೆ 948316662) ಕರೆ ಮಾಡಬಹುದು ಅಥವಾ ಪ್ರಾಧಿಕಾರಕ್ಕೆ ನೇರವಾಗಿ ಭೇಟಿ ನೀಡಿ ತಮ್ಮ ಅಹವಾಲು ಸಲ್ಲಿಸಬಹುದುದಾಗಿದೆ. ಇಂತಹ ಅಹವಾಲುಗಳನ್ನು ಪರಿಶೀಲಿಸಿ 30 ದಿನಗಳೊಳಗಾಗಿ ಪರಿಹಾರ ಒದಗಿಸಲಾಗುವುದು. ಒಂದು ವೇಳೆ ಸಾಧ್ಯವಾಗದಿದ್ದಲ್ಲಿ ಹಿಂಬರಹ ನೀಡಿ ಅರ್ಜಿಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಿಕರ ಅಹವಾಲಿಗೆ ಸಂಬಂಧಪಟ್ಟ ಅಧಿಕಾರಿಗಳು 30 ದಿನಗಳಲ್ಲಿ ಕೈಗೊಂಡಿರುವ ಪರಿಹಾರ ಕ್ರಮವು ಸಾರ್ವಜನಿಕರಿಗೆ ತೃಪ್ತಿವಾಗದಿದ್ದಲ್ಲಿ ಅಂತಹ ಪ್ರಕರಣಗಳನ್ನು ಗುರುವಾರಗಳಂದು ನಡೆಯುವ ವಲಯವಾರು ಸಾರ್ವಜನಿಕರ ಸಮಕ್ಷಮ ದೂರು / ಮನವಿಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕಾನೂನು ಪ್ರಕಾರ ಸಭೆ ನಡೆಸಲಾಗುತ್ತದೆ. ಈ ಹೊಸ ವ್ಯವಸ್ಥೆಗೆ ಪ್ರಾಧಿಕಾರದ ಕಾರ್ಯದರ್ಶಿ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಿದ್ದು, ಹೆಚ್ಚುವರಿ ಹೊಣೆಯನ್ನು ಭೂಸ್ವಾಧೀನಾಧಿಕಾರಿಗೆ (ಕಾರಂತ ಬಡಾವಣೆ ವಿಭಾಗ) ವಹಿಸಲಾಗಿದೆ. ಈ ಹೊಸ ವ್ಯವಸ್ಥೆಯನ್ನು ನಾಗರಿಕರು ಬಳಸಿಕೊಳ್ಳಬಹುದು ಎಂದು ಬಿಡಿಎ ಆಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net