ಮನೆ ನಿರ್ಮಿಸುವವರಿಗೆ ಬಿಡಿಎ ಅಡ್ಡಗಾಲು: ರೈತರ ತೀವ್ರ ಆಕ್ಷೇಪ

bda office
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಲು ಉದ್ದೇಶಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮುಂದುವರಿದ ಭಾಗ ಹಾಗೂ ಹೊಸ ಲೇಔಟ್‌ಗಳು ಬರಲಿರುವ ಪ್ರದೇಶದಲ್ಲಿ ಸ್ಥಳೀಯರು ನಿರ್ಮಿಸಿಕೊಳ್ಳುವ ಸ್ವಂತ ಮನೆಗೆ ಪ್ರಾಧಿಕಾರ ಅಡ್ಡಗಾಲು ಹಾಕುತ್ತಿದೆ ಎಂಬುದಾಗಿ ರೈತರು ದೂರಿದ್ದಾರೆ.

ಹಾಲಿ ಕೆಂಪೇಗೌಡ ಲೇಔಟ್‌ಗೆ ಹೊಂದಿಕೊಂಡಂತೆ ಮುಂದುವರಿದ ಬಡಾವಣೆ ಹಾಗೂ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಸಮುತ್ತಮುತ್ತಲಿನ ಗ್ರಾಮಗಳಲ್ಲಿ ಸ್ಥಳೀಯರು ಸೂರು ನಿರ್ಮಿಸಿಕೊಳ್ಳಲು ಸಮಸ್ಯೆ ಉಂಟಾಗಿದೆ. ತಮ್ಮದೇ ಸ್ವಂತ ಸ್ಥಳದಲ್ಲಿ ಮನೆ ನಿರ್ಮಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ, ಬಿಡಿಎ ನಮಗೆ ನೋಟಿಸ್ ನೀಡಿ ಮನೆ ನಿರ್ಮಿಸದಂತೆ ನಿರ್ಬಂಧ ವಿಧಿಸಿದೆ ಎಂದು ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹಾಗೂ ತಾವರೆಕೆರೆ ಹೋಬಳಿಯ ಹಳ್ಳಿಗರು ಆಕ್ಷೇಪ ಎತ್ತಿದ್ದಾರೆ.

ಕಳೆದೊಂದು ವರ್ಷದಿಂದ ಬಿಡಿಎ ಹಲವು ಗ್ರಾಮಗಳ ರೈತರಿಗೆ ನೋಟಿಸ್ ನೀಡುತ್ತಿದೆ. ಜತೆಗೆ ಅನುಮೋದನೆ ಪಡೆಯದ ಲೇಔಟ್‌ಗಳಲ್ಲಿರುವ ಸೈಟ್‌ದಾರರಿಗೆ ನೋಟಿಸ್ ಜಾರಿ ಮಾಡಿದೆ. ಆದರೆ, ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ತಡೆ ಒಡ್ಡುವ ಭರದಲ್ಲಿ ಸ್ಥಳೀಯರಾದ ನಮಗೆ ಸೂರು ನಿರ್ಮಿಸದಂತೆ ತಾಕೀತು ಮಾಡಲಾಗುತ್ತಿದೆ. ಹೊಸ ಲೇಔಟ್‌ಗಾಗಿ ಭೂಸ್ವಾಧೀನ ಅಧಿಸೂಚನೆ ಹೊರಡಿಸದಿದ್ದರೂ, ಸ್ವಂತ ಉಪಯೋಗಕ್ಕೆ ಮನೆ ನಿರ್ಮಿಸಿಕೊಳ್ಳಲು ಅಡ್ಡಿಪಡಿಸುವುದು ಯಾವ ನ್ಯಾಯ ಎಂದು ತಾವರೆಕರೆ ಭಾಗದ ರೈತರು ಪ್ರಾಧಿಕಾರದ ವಿರುದ್ಧ ಸಿಟ್ಟು ವ್ಯಕ್ತಪಡಿಸಿದ್ದಾರೆ.

ಹೊಸ ಲೇಔಟ್‌ಗಳಿಗೆ ಬಿಡಿಎ ನೆಪ:

ಪಿಆರ್‌ಆರ್ ಸುತ್ತಮುತ್ತ ಹೊಸದಾಗಿ 6 ಬಡಾವಣೆಗಳನ್ನು ನಿರ್ಮಿಸಲು ಪ್ರಾಧಿಕಾರ ನಿರ್ಧರಿಸಿದೆ. ಜತೆಗೆ ಕೆಂಪೇಗೌಡ ಮುಂದುವರಿದ ಲೇಔಟ್ ರಚಿಸಲೂ ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ಜಮೀನು ಗುರುತು ಮಾಡಿ ಕಾಯ್ದಿರಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಸರ್ಕಾರ ಕೂಡ ಬಡಾವಣೆ ರಚಿಸಲು ಒಪ್ಪಿಗೆ ನೀಡಿದೆಯಾದರೂ, ಇನ್ನೂ ಭೂಸ್ವಾಧೀನ ಸಂಬಂಧ ಯಾವುದೇ ಅಧಿಸೂಚನೆ ಹೊರಬಿದ್ದಿಲ್ಲ. ಆದರೂ, ಭವಿಷ್ಯದಲ್ಲಿ ಲೇಔಟ್ ನಿರ್ಮಿಸಲು ಯಾವುದೇ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಲು ಪ್ರಾಧಿಕಾರ ಅಂತಹ ಜಮೀನುಗಳಲ್ಲಿ ಮನೆಗಳ ನಿರ್ಮಾಣಕ್ಕೆ ತಡೆ ಒಡ್ಡುತ್ತಿದೆ. ಅಧಿಸೂಚನೆ ಹೊರಡಿಸಿದ ನಂತರವಷ್ಟೇ ಪ್ರಾಧಿಕಾರವು ಕಟ್ಟಡ ನಿರ್ಮಾಣಕ್ಕೆ ತಡೆ ಒಡ್ಡಬೇಕೆ ಹೊರತು ಸ್ಥಳೀಯರು ತಮ್ಮ ಸ್ವಂತಕ್ಕೆ ನಿರ್ಮಿಸಿಕೊಳ್ಳುವ ಮನೆಗಳಿಗೆ ಅಲ್ಲ ಎಂದು ರೈತರು ಪ್ರತಿಕ್ರಿಯಿಸಿದ್ದಾರೆ.

ರೈತರ ಆರೋಪಕ್ಕೆ ಬಿಡಿಎ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಸಂಸ್ಥೆಯಿಂದ ಜಾರಿ ಮಾಡಿರುವ ನೋಟಿಸ್ ಸಮರ್ಥನೆಗೆ ನಿಂತಿದ್ದಾರೆ. ಅನಧಿಕೃತ ಲೇಔಟ್ ನಿರ್ಮಾಣದ ವಿರುದ್ಧ ಇಂತಹ ಕ್ರಮ ಇದ್ದಲ್ಲಿ ನಮ್ಮದೇನೂ ಅಭ್ಯಂತರ ಇಲ್ಲ. ಆದರೆ, ಸ್ಥಳೀಯರು ಸ್ವಂತಸಕ್ಕಾಗಿ ಸೂರು ನಿರ್ಮಿಸಿಕೊಳ್ಳುವುದನ್ನು ತಡೆಯಬಾರದು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ಬೆಸ್ಕಾಂನಿಂದಲೂ ಸಿಗುತ್ತಿಲ್ಲ ಎನ್‌ಒಸಿ:

ಹೊಸ ಲೇಔಟ್ ರಚಿಸುವ ಹಿನ್ನೆಲೆಯಲ್ಲಿ ಆಯಾ ಪ್ರದೇಶಗಳಲ್ಲಿ ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಬಿಡಿಎ ವತಿಯಿಂದ ಬೆಸ್ಕಾಂಗೆ ಪತ್ರ ಬರೆದು ವಿನಂತಿಸಿದೆ. ಇದನ್ನಾಧರಿಸಿ ಬೆಸ್ಕಾಂ ಕೂಡ ರೈತರು ಸೇರಿದಂತೆ ಯಾವುದೇ ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಜತೆಗೆ ತನ್ನ ಕಡೆಯಿಂದ ಎನ್‌ಒಸಿ ಕೂಡ ವಿತರಿಸುತ್ತಿಲ್ಲ. ಹೀಗಾದರೆ ರೈತರು ತಮ್ಮ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಬಾರದೆ, ಕುಟುಂಬಗಳು ವಿಭಜನೆ ಆದಲ್ಲಿ ಆಗಲೂ ಸೂರು ನಿರ್ಮಿಸಿಕೊಳ್ಳಬಾರದೆ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net